
ಆರಂಭದಲ್ಲಿ ಕೋಟಿ ದಾಟಿದ ಆಡಿಯೋ ಹಕ್ಕುಗಳ ಮಾರಾಟದಿಂದ ಗಮನ ಸೆಳೆದಿದ್ದ ಅದ್ದೂರಿ ‘ಕೆಡಿ’, ಅದೇ ಹಾಡುಗಳಿಂದ ವಿವಾದ ಮೈಮೇಲೆ ಎಳೆದುಕೊಂಡಿತ್ತು. ಇದೀಗ ಎಲ್ಲಾ ವಿವಾದಗಳನ್ನು ದಾಟಿ ಚಿತ್ರವು ಬಿಡುಗಡೆಗೆ ಸಜ್ಜುಗೊಂಡಿದೆ.
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ, ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಚಿತ್ರ ಸಾಕಷ್ಟು ವಿವಾದಗಳನ್ನು ದಾಟಿ
ಕಡೆಗೂ ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಪಡೆದು ನಾಳೆ (ಏಪ್ರಿಲ್ 30)ರಂದು ಅದ್ದೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದೆ.
ಧ್ರುವ ಸರ್ಜಾ ಮುಖ್ಯ ಪಾತ್ರದಲ್ಲಿದ್ದು, ರೀಶ್ಮಾ ನಾಣಯ್ಯ ಅವರ ಜೋಡಿಯಾಗಿ ನಟಿಸಿದ್ದಾರೆ. ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನ ಸ್ಟಾರ್ ನಟರೇ ದಂಡೇ ಇರುವ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಂಜಯ್ ದತ್, ಶಿಲ್ಪಾ ಶೆಟ್ಟಿ, ವಿ.ರವಿಚಂದ್ರನ್, ರಮೇಶ್ ಅರವಿಂದ್ ಹೀಗೆ ದೊಡ್ಡ ತಾರಾ ಬಳಗವನ್ನೇ ಕಲೆ ಹಾಕಿದ್ದಾರೆ ಜೋಗಿ ಪ್ರೇಮ್.
ಸೋಮವಾರ ಹಮ್ಮಿಕೊಳ್ಳಲಾಗಿದ್ದ ಬಿಡುಗಡೆ ಪೂರ್ವ ಸುದ್ದಿಗೋಷ್ಠಿ ಸುದೀಪ್ ಮಯವಾಗಿತ್ತು. ಕಾಲ ಭೈರವನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುದೀಪ್ ಗೆ ಆ ಪಾತ್ರಕ್ಕೆ ಪಟ್ಟು ಹಿಡಿದು ಒಪ್ಪಿಸಿದರಂತೆ ಪ್ರೇಮ್..!
















