
ರೇಟಿಂಗ್ : 3.5/5
ನಿರ್ಮಾಣ : ಗರಿಮಾ ಅವಿನಾಶ್
ನಿರ್ದೇಶನ : ಮಹಾಂತೇಶ್ ಹಂದ್ರಾಳ
ಬ್ಯಾಂಕ್ ಗಳ ದಿವಾಳಿ
ವಂಚನೆಯ ಸರಪಳಿ..

ಬಡ ಮಧ್ಯಮದ ವರ್ಗದ ಜನರಿಗೆ ಆಸರೆಯಾಗಿರಬೇಕಾದ ಸಹಕಾರಿ ಬ್ಯಾಂಕ್ ಗಳು ದಿವಾಳಿ ಏಳುತ್ತಾ ಅದೆಷ್ಟೋ ಕುಟುಂಬಗಳನ್ನು ಬೀದಿ ಪಾಲು ಮಾಡಿರುವುದು ನಿಜ ಜೀವನದಲ್ಲಿ ವಾಸ್ತವ ಸಂಗತಿಗಳು..
ಇದನ್ನೇ ಆಧರಿಸಿದ ಚಿತ್ರದಲ್ಲಿ ಮನುಷ್ಯನ ಸ್ವಾರ್ಥ ಅಧಿಕಾರ ಲಾಲಸೆ ಮತ್ತು ವಂಚನೆಯ ವಿವಿಧ ಮುಖಗಳು ಅನಾವರಣವಾಗುತ್ತಾ ಹೋಗುವುದು ಕ್ಷಣ ಕ್ಷಣದ ಥ್ರಿಲ್ಲಿಂಗ್..
ಇಲ್ಲಿ ಅಮರಜ್ಯೋತಿ ಸಹಕಾರಿ ಬ್ಯಾಂಕ್ ದಿವಾಳಿಯಾಗುತ್ತದೆ. ಅದರಲ್ಲಿ ಹೂಡಿಕೆ ಮಾಡಿದ ಜನರು ಸಾಯುತ್ತಾರೆ; ಅಸಹಾಯಕತೆಯಲ್ಲಿ ರೋಧಿಸುತ್ತಾರೆ ಮತ್ತು ಮರುಗುತ್ತಾರೆ. ಆದರೆ ಅವರ ದುಃಖಕ್ಕೆ ಸ್ಪಂದನೆ ಸಿಗುವುದಿಲ್ಲ..
ಒಬ್ಬ ಪತ್ರಕರ್ತ ಮತ್ತು ಪೊಲೀಸ್ ಅಧಿಕಾರಿ ಇದರ ರಹಸ್ಯ ಭೇದಿಸಲು ಅವರದೇ ಧಾಟಿಯಲ್ಲಿ ಹೋರಾಟ ನಡೆಸುವುದು ಮತ್ತು ಬುದ್ಧಿವಂತೆಕೆಯಿಂದ ಟಿಟ್ ಫಾರ್ ಟ್ಯಾಟ್ ಎನ್ನುವುದೂ ರೋಚಕ..

ಪತ್ರಕರ್ತ ಅಭಿರಾಮ್ ಮಹಾನ್ ಶಕ್ತಿವಂತ. ಎದುರಾಳಿಗಳನ್ನು ಮುಲಾಜಿಲ್ಲದೆ ಹೊಡೆದು ಉರುಳಿಸುತ್ತಾನೆ. ತನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಚಚ್ಚಿ ಬೀಸಾಕುತ್ತಾನೆ. ಜೊತೆಗೆ ಬುದ್ಧಿಮತ್ತೆ ಮರೆಯುತ್ತಾನೆ..
ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ರಂಜಿತ್ ಕುಮಾರ್ ಗಡ್ಡ ಬಿಟ್ಟಿರುವ ಖಡಕ್ ಪೊಲೀಸ್, ಬುದ್ಧಿಮತ್ತೆ ಚುರುಕುತನ ಇದ್ದರೂ ಒಂದಷ್ಟು ಹುಂಬುತನವೂ ಇರುತ್ತದೆ..
ರಂಜಿತ್ ಕುಮಾರ್ ಸಹೋದರಿಯನ್ನು ಪ್ರೇಮಿಸುವುದರಿಂದ ಅಭಿರಾಮ್ ಮತ್ತು ರಂಜಿತ್ ಕುಮಾರ್ ಭಾವ ಭಾಮೈದ ಆಗುತ್ತಾರೆ ಮುಂದಿನ ಆಟವೆಲ್ಲಾ ಎದುರಾಳಿ ವರಸೆಗಳು. ಪತ್ರಿಕೋದ್ಯಮ ಮತ್ತು ಪೊಲೀಸ್ ವ್ಯವಸ್ಥೆಯ ವ್ಯಂಗ್ಯದ ವಿವರಗಳೂ ಲಭ್ಯ..
ಒಬ್ಬರ ಸ್ವಾರ್ಥ, ವ್ಯವಸ್ಥೆಯ ಲೋಪ ಇವುಗಳ ಕಾರಣದಿಂದ ಅಮಾಯಕ ಜನರ ಬದುಕು ಹೇಗೆ ಬೀದಿ ಪಾಲಾಗುತ್ತದೆ ಎಂಬುದರ ಸುತ್ತ ಹೆಣೆಯಲಾಗಿರುವ ಕಥೆಯಲ್ಲಿ ಸ್ವಾರ್ಥ ಮತ್ತು ದುರಾಸೆ ತುಂಬಿರುವ ಜನರ ಕ್ರೌರ್ಯದ ಮುಖ ಅನಾವರಣ ಮಾಡಲು ನಡೆಸುವ ಕಸರತ್ತುಗಳು ತಾರ್ಕಿಕತೆಯಿಂದ ಬಹು ದೂರ..
ರಂಜಿತ್ ಕುಮಾರ್ ವರಸೆಗಳು ವಿಲನ್ ಶೆಡ್ ಆಗಿ ಪರಿವರ್ತನೆ ಕಂಡಾಗ ಅಭಿರಾಮ್ ಹೀರೋ; ಮುಂದಿನದು ತಮಾಷೆಯಿಂದ ಕೂಡಿದ ಚಿತ್ರ ವಿಚಿತ್ರ ಕಲ್ಪನೆಗಳು. ಆದರೆ ಆಧುನಿಕತೆಯ ಸ್ಪರ್ಶ ಇರುವುದರಿಂದ ಅವೆಲ್ಲಾ ಸಹ್ಯವಾಗುವ ವಿಷಯಗಳು..

ಅಭಿರಾಮ್ ಜೊತೆಗೆ ಹಾಡು ಫೈಟ್ ತಮಾಷೆ ಎಲ್ಲವೂ ಇರುತ್ತವೆ. ರಂಜಿತ್ ಕುಮಾರ್ ಸಂಗತಿಗಳೂ ರೋಚಕ. ಹಾಗಾಗಿ ಕ್ಷಣ ಕ್ಷಣವೂ ಕುತೂಹಲ. ಆದರೆ ಸತ್ತ ಮನುಷ್ಯನನ್ನು ಎರಡು ಮೂರು ದಿನ ಜೊತೆಗೇ ಇಟ್ಟುಕೊಳ್ಳುವುದು. ತಮಾಷೆಯ ಬ್ಯಾಂಕ್ ಲಾಕರ್ ಮೊದಲಾದವು ಅತಾರ್ಕಿಕ ವಿಷಯಗಳು..
ಶಕ್ತಿವಂತ ಪತ್ರಕರ್ತನ ಪಾತ್ರದಲ್ಲಿ ನಿರಂಜನ್ ಸುಧೀಂದ್ರ ಅವರದು ಬಿಂದಾಸ್ ವರಸೆ. ಡ್ಯಾನ್ಸ್ ಫೈಟ್ ಗಳಲ್ಲಿ ಅವರದು ಗಮನ ಸೆಳೆಯುವ ವರಸೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಲವ್ಲಿಸ್ಟಾರ್ ಪ್ರೇಮ್ ಖಡಕ್ ವರಸೆ. ಎರಡು ಮೂರು ಶೇಡ್ ನ ಪಾತ್ರದಲ್ಲಿ ಅವರದು ಲೀಲಾ ಜಾಲ ನಟನೆ.
ಭಾವನಾ ಮೆನನ್, ರಮೇಶ್ ಇಂದಿರಾ, ನೆ.ಲ.ನರೇಂದ್ರಬಾಬು, ಬ.ಲ.ರಜವಾಡಿ ಮೊದಲಾದವರ ಪಾತ್ರಗಳು ಗಮನಾರ್ಹ. ರಚನಾ ಇಂದಿರ್, ಧರ್ಮಣ್ಣ ಕಡೂರು ಹಾಗೂ ಮಹಾಂತೇಶ್ ಹೀರೇಮಠ್ ಅವರ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ.
ಇಡೀ ಚಿತ್ರದಲ್ಲಿ ರಘು ನಿಡುವಳ್ಳಿ ಅವರ ಚುರುಕು ಸಂಭಾಷಣೆಯ ಭಾಗ ಬೇರೆಯೇ ಆಗಿ ಕಾಣುತ್ತದೆ..
ಸಚ್ಚಿನ್ ಬಸ್ರೂರ್ ಸಂಗೀತದಲ್ಲಿ ಹಾಡುಗಳ ಅಬ್ಬರ ಜೋರು, ಸ್ವಾಮಿ ಜೆ.ಗೌಡ ಅವರ ಛಾಯಾಗ್ರಹಣ ಚಿತ್ರಕ್ಕೆ ಪೂರಕ..
















