
ರೇಟಿಂಗ್ : 3/5
ನಿರ್ಮಾಣ : ಎನ್.ನರಸಿಂಹಮೂರ್ತಿ
ನಿರ್ದೇಶನ : ಓಂ ಸಾಯಿ ಪ್ರಕಾಶ್
ಸಾಮಾನ್ಯ ಮನುಷ್ಯ
ಸಾಮಾನ್ಯ ವರಸೆಗಳು

ಒಬ್ಬ ಸಾಮಾನ್ಯ ಮನುಷ್ಯ ಮುಖ್ಯಮಂತ್ರಿಯಾದರೆ ಏನೆಲ್ಲಾ ಬದಲಾವಣೆ ತರಬಹುದು ಎಂಬುದರ ಅಭಿವ್ಯಕ್ತಿಯಂತೆ ಇರುವ ಸಿನಿಮಾದಲ್ಲಿ ಕಾಣುವುದು ಸಾಮಾನ್ಯ ವರಸೆಗಳೇ..
ಅಚ್ಚರಿ ಎಂದರೆ ಈ ಸಾಮಾನ್ಯ ಮನುಷ್ಯ ಅಪರಿಮಿತ ಬುದ್ಧಿವಂತನಾದರೂ ಅಧಿಕಾರದ ಆಳ ಅಗಲ ಮತ್ತು ವ್ಯಾಪ್ತಿ ತಿಳಿಯದಷ್ಟು ಅಮಾಯಕ. ಇಲ್ಲಿನ ಅಧಿಕಾರಸ್ಥ ಸಿಎಂ ಆತನಿಗಿಂತಲೂ ಅಮಾಯಕ.
ಹಾಗಾಗಿ ಜ್ಯೋತಿಷ್ಯ ಹೇಳುವ ಸ್ವಾಮೀಜಿಯ ಮಾತು ಕೇಳಿ ಅಧಿಕಾರದ ಖುರ್ಚಿ ಬಿಡುತ್ತಾನೆ. ಹಾಗೆಯೇ ಚಾಣಕ್ಷ ವಕೀಲನಿಗೆ ಅಧಿಕಾರ ಹಸ್ತಾಂತರ ಮಾಡುತ್ತಾನೆ..
ಸಾಮಾನ್ಯ ಮನುಷ್ಯನಿಗೆ ಅಧಿಕಾರ ಸಿಕ್ಕಿದಾಗ ಆತ ಜನರ ಹಿತ ಕಾಯುತ್ತಾನೆ ಎಂಬುದು ಗಟ್ಟಿಯಾದ ಕಲ್ಪನೆ. ಇದಕ್ಕೆ ಪೂರಕವಾಗಿ ಹೆಣೆಯಲಾಗಿರುವ ದೃಶ್ಯಗಳು ನೋಡಲು ಚೆಂದ..
ಆದರೆ..
ಕುಮಾರ್ ಕಂಸಾಳೆ ಎಂಬ ವಕೀಲ ವೃತ್ತಿಯ ಸಾಮಾನ್ಯ ಮನುಷ್ಯ ಮುಖ್ಯಮಂತ್ರಿ ಹುದ್ದೆಗೇರುವುದು ಮತ್ತು ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ತರುವಲ್ಲಿ ಕಾರ್ಯೋನ್ಮುಖ ಆಗುವುದಕ್ಕಿಂತ ವೇಷ ಮರೆಸಿಕೊಂಡು ಸಾಮಾನ್ಯನೇ ಆಗುವುದು ವಿಭಿನ್ನ..

ಇದೇ ವೇಳೆ ಹುಡುಗಿಯರ ಮಸಾಜ್ ನೆಪದಲ್ಲಿ ಡುಯೆಟ್ ಹಾಡುವುದೂ ನಡೆಯುತ್ತದೆ. ಒಬ್ಬ ಮುಖ್ಯಮಂತ್ರಿ ಮತ್ತು ಆತನಿಗೆ ಇರಬಹುದಾದ ಶಿಷ್ಟಾಚಾರದ ಕಲ್ಪನೆಗಳು ಬೇರೆ ಕಲ್ಪನೆಗಳ ಜೊತೆ ಬೆರೆತು ಮರೆಯಾಗಿವೆ..
ಭದ್ರತೆಗೆ ಕೇವಲ ಒಬ್ಬ ಮಹಿಳಾ ಅಧಿಕಾರಿ ಹಾಗೆಯೇ ಕುಮಾರ್ ಕಂಸಾಳೆಗೆ ಜೋಡಿಯಾಗಿ ಬರುವ ಹುಡುಗಿ ಆತನ ಅಕ್ಕ ಪಕ್ಕ ನಡಿಗೆಯಲ್ಲಿ ಬಿಲ್ಡಪ್ ತೋರುವಂತೆ ನಡೆಯುವುದೇ ವಿಶೇಷ..
ಕುಮಾರ್ ಕಂಸಾಳೆ ಮಾರು ವೇಷದಲ್ಲಿ ಪತ್ತೆ ಹಚ್ಚುವ ವಿಷಯಗಳು ಟಿವಿಯ ಬ್ರೇಕಿಂಗ್ ನ್ಯೂಸ್ ನಲ್ಲಿ ಪ್ರಸಾರವಾಗುವ ಸನ್ನಿವೇಶಗಳು ಪ್ರೇಕ್ಷಕನಿಗೆ ಕಬ್ಬಿಣದ ಕಡಲೆಯಂತೆ..

ಮುಖ್ಯಮಂತ್ರಿ ಆಡಳಿತಾತ್ಮಕ ವಿಷಯಗಳಿಗೆ ಹೆಚ್ಚು ಗಮನ ಹರಿಸುವುದಿಲ್ಲ; ಬದಲಾಗಿ ಸಾಮಾನ್ಯರಿಗೆ ತೊಂದರೆ ಉಂಟು ಮಾಡುವ ಉಪಟಳಗಳನ್ನು ಪತ್ತೆ ಹಚ್ಚುವುದು ಮಾನವೀಯ ನೆಲೆಯಲ್ಲಿ ಸರಿ; ಆದರೆ ಅಡಳಿತದ ಒಳನೋಟಗಳತ್ತ ಗಮನ ಹರಿಸದಿರುವುದು ದೊಡ್ಡ ಕೊರತೆಯಾಗಿ ಕಾಡುತ್ತದೆ..
ಹಾಗಾಗಿ ಸಾಮಾನ್ಯ ಮನುಷ್ಯ ಮುಖ್ಯಮಂತ್ರಿಯಾಗಿ ಅತ್ಯುತ್ತಮ ಆಡಳಿತ ನೀಡಲು ಇಲ್ಲಿ ಅನುಭವವೇ ಒಂದು ದೊಡ್ಡ ಕೊರತೆ. ರಾಜಕಾರಣಿಗಳು ನಡೆಸುವ ಸಂಚು ಮತ್ತು ಖಾದಿ ಖಾಕಿ ಖಾವಿಯೊಳಗಿನ ಕುದಿತ ಎಲ್ಲವೂ ಸರಿಯಾದ ಅಭಿವ್ಯಕ್ತಿ ಪಡೆದಿದ್ದರೆ ಅದರ ಕಥೆಯೇ ಬೇರೆ ಇತ್ತು..
ಕೆರೆ ಬೇಟೆ ಬಳಿಕೆ ಗೌರಿ ಶಂಕರ್ ಹೊಸತನದ ಪಾತ್ರಕ್ಕೆ ಹೊಂದಿಕೊಂಡಿರುವುದು ವಿಶೇಷ. ನಿರ್ಮಾಪಕ ಎನ್.ನರಸಿಂಹಮೂರ್ತಿ ನಿಜವಾದ ಮುಖ್ಯಮಂತ್ರಿ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.
ಇನ್ನುಳಿದಂತೆ ಅಶೋಕ್, ರಮೇಶ್ ಭಟ್, ಬ.ಲ.ರಾಜವಾಡಿ, ಗಣೇಶ್ ರಾವ್ ಕೇಸರ್ಕರ್, ನಾಗೇಂದ್ರ ಅರಸ್, ಶೃಂಗೇರಿ ರಾಮಣ್ಣ, ಶಿವಮೊಗ್ಗ ರಾಮಣ್ಣ, ಎಸ್ಕಾರ್ಟ್ ಶ್ರೀನಿವಾಸ್ ಹೀಗೆ ದೊಡ್ಡ ತಾರಾಗಣ ಗಮನ ಸೆಳೆಯುತ್ತದೆ..

ವಿನಯ್ ಚಂದ್ರ ಸಂಗೀತ ನಿರ್ದೇಶನದಲ್ಲಿ ಎರಡು ಹಾಡುಗಳು ಸುಮಧುರ. ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕ..
















