
ನಿರ್ಮಾಣ : ಡಾ.ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ
ನಿರ್ದೇಶನ : ಗುರು ಹೆಗ್ಡೆ ಹಾಗೂ ವಿನಯ್ ಪ್ರೀತಂ
ಪ್ರೇಮ ಅಜರಾಮರ..
ಕಾಲವೂ ಮರೆಸದ ಪ್ರೀತಿ

ಬಾಲ್ಯದಲ್ಲಿ ಮೈದಳೆಯುವ ಪ್ರೀತಿಯನ್ನು ಯೌವನ ಪೋಷಿಸುತ್ತದೆ. ಕಾಲ ಒಂದಾಗಲು ಅನುವು ಮಾಡಿಕೊಟ್ಟರೂ ಪರಿಸ್ಥಿತಿ ಮೇರೆ ಮೀರುತ್ತದೆ..
ಇಲ್ಲಿ ಪ್ರೇಮದ ಎರಡು ಸ್ತರಗಳಲ್ಲಿ ಅನೇಕ ಘಟನೆಗಳು ನಡೆದು ಹೋಗುತ್ತವೆ. ಬದುಕು ಎಂಬುದು ಅಚ್ಚರಿ ಮತ್ತು ತಿರುವುಗಳ ಮೂಟೆ ಎಂಬುದನ್ನು ಹೇಳಲು ಹೊರಟ ನಿರ್ದೇಶಕರ ಪ್ರಯತ್ನ ಸರಿ; ಆದರೆ ಅದನ್ನು ಪ್ರಸ್ತುವ ಪಡಿಸುವ ಮಾರ್ಗದ ತುಂಬೆಲ್ಲಾ ಬರೀ ಕಲ್ಲು ಮುಳ್ಳು. ಹಾಗಾಗಿ ಪ್ರೇಕ್ಷಕ ಸುಸ್ತಾಗುತ್ತಾನೆ..
ಅಮೃತಹಳ್ಳಿ ಎಂಬುದು ಹೋಬಳಿಗೆ ಹೋಲಿಕೆ ಇರುವ ಗ್ರಾಮ. ಅಲ್ಲಿ ಶಾಲೆ ಮತ್ತು ಜನರು ಬೇರೆ ರೀತಿ. ಮಲೆನಾಡಿನ ಆ ಪರಿಸರದಲ್ಲಿ ಚಿಕ್ಕ ಚಿಕ್ಕ ವಿಷಯಗಳೇ ಮನರಂಜನೆ.
ಮೊದಲರ್ಧ ಶಾಲೆಯ ಹುಡುಗರ ಚಟುವಟಿಕೆ ಮತ್ತು ಪ್ರೇಮದ ಸುತ್ತ ನಡೆಯುವ ಕಥೆಯಲ್ಲಿ ಜನರ ಆಸೆಬುರುಕ ಪ್ರಯತ್ನ ಮತ್ತು ಅಸಹಾಯಕತೆಯನ್ನೂ ಬಿಂಬಿಸಲಾಗಿದೆ.
ದ್ವಿತೀಯಾರ್ಧದಲ್ಲಿ ನಿಜವಾದ ಕಥೆ ಬಿಚ್ಚಿಕೊಳ್ಳುತ್ತದೆ. ಇಲ್ಲಿ ಶ್ರೀನಗರ ಕಿಟ್ಟಿ, ಮೇಘನಾರಾಜ್, ಕೃತಿ ಶೆಟ್ಟಿ ಮೊದಲಾವರ ಕಾರಣದಿಂದ ಕಥೆಯಲ್ಲಿ ಆಸಕ್ತಿಕಾರಕ ಅಂಶಗಳು ಕಾಣಿಸುತ್ತವೆ. ಆದರೆ ಸೀರಿಯಲ್ ಗಳನ್ನು ಮೀರಿದ ನಿಧಾನಗತಿಯ ನಿರೂಪಣೆ ಸಹನೆ ಪರೀಕ್ಷಿಸುತ್ತದೆ.
ಒಂದು ಪ್ರೀತಿಗೆ ಎರಡನೇ ಅವಕಾಶ ಸಿಗುತ್ತದೆ. ಆದರೆ ಅದೃಷ್ಟ ಕೈ ಕೊಡುತ್ತದೆ. ಜೀವನದ ಆಶಯಗಳು ಏನೇ ಇದ್ದರೂ ವಿಧಿ ಬೇರೆ ರೀತಿಯ ಆಟವಾಡುತ್ತದೆ ಎಂಬುದರ ವಿವರಣೆ ಮತ್ತಷ್ಟು ಗಟ್ಟಿತನದಿಂದ ಅಥವಾ ಬೇರೆ ರೀತಿಯಲ್ಲಿ ವ್ಯಕ್ತವಾಗಿದ್ದರೆ ಚಿತ್ರವೇ ಬೇರೆಯಾಗುತ್ತಿತ್ತು.
ಆದರೆ ಧಾರವಾಹಿ ನಿರ್ದೇಶನದ ಹಿನ್ನೆಲೆ ಇರುವ ನಿರ್ದೇಶಕರು ಇಲ್ಲಿಯೂ ಅದನ್ನೇ ಪ್ರಸ್ತುತಪಡಿಸಲು ಹೋಗಿದ್ದಾರೆ ಮಾತ್ರವಲ್ಲ ಪ್ರೇಮದ ಅಭಿವ್ಯಕ್ತಿಗೆ ಕಾಲಮಾನದ ಸ್ಪರ್ಶವನ್ನೇ ನೀಡದೆ ಹಳೆಯ ಸಂಪ್ರದಾಯ ಮುಂದುವರೆಸುತ್ತಾರೆ.
ಶ್ರೀನಗರ ಕಿಟ್ಟಿ ಸಂಯಮದಿಂದಲೇ ನಟಿಸಿದ್ದಾರೆ. ಮೇಘನಾರಾಜ್ ನಟನೆಗೆ ಹೆಚ್ಚು ಅವಕಾಶಗಳಿಲ್ಲ; ಕೃತಿ ಶೆಟ್ಟಿ ಗಮನ ಸೆಳೆಯುತ್ತಾರೆ. ಅಲ್ಲಲ್ಲಿ ಉಪ ಕಥೆಗಳು ಬಂದರೂ ಮನಮಿಡಿಸುವುದಿಲ್ಲ.
ಇಷ್ಟಾದರೂ ಅಮೃತಹಳ್ಳಿ, ಪೀಟಿ ಮಾಸ್ಟರ್, ಶಾಂತಿ ಟೀಚರ್, ಅನಿತಾ ಟೀಚರ್, ರಮೇಶ, ಲಕ್ಷ್ಮಿ, ಶಿವು, ಗೋವಿಂದಣ್ಣ, ಜೆನ್ನಿಫರ್ ಮನಸ್ಸಿನಲ್ಲಿ ಉಳಿಯುತ್ತಾರೆ..
















