
ರೇಟಿಂಗ್ : 3/5
ನಿರ್ಮಾಣ : ಶ್ವೇತಾ ಬಾಲರಾಜ್
ನಿರ್ದೇಶನ : ದಿ.ಸಂತೋಷ್ ಬಾಲರಾಜ್
ಪ್ರೇಮ ವಿವಾಹಕ್ಕೆ ಫ್ರೆಂಡ್ಲಿ
ದುಷ್ಟ ಸಂಹಾರಕ್ಕೆ ಡೆಡ್ಲಿ..

ಒಂದು ಪ್ರೇಮ ಕಥೆಯ ಸುತ್ತ ಹಲವು ವಿಷ ವರ್ತುಲಗಳಿರುತ್ತವೆ. ಅವುಗಳನ್ನು ಜಾಣ್ಮೆ ಮತ್ತು ಧೈರ್ಯದ ಸಾಹಸಗಳಿಂದ ಭೇದಿಸುವ ಯುವಕ ಪ್ರೇಮಿಗಳಿಗೆ ಆಪ್ತ ಬಂಧು..
ಆತನೇ ಬೆಂಟ್ಲಿ..!
ಕಣ್ಣುಗಳನ್ನು ಬೆಂಕಿ ಉಂಡೆ ಮಾಡುವ ಬೆಂಟ್ಲಿ ಹೃದಯ ಥೇಟ್ ಆ ಕಾರಿನಷ್ಟೇ ಶ್ರೀಮಂತ..!
ಪ್ರೇಮಿಗಳಿಗೆ ಮದುವೆ ಮಾಡಿಸಿ ಖುಷಿ ಪಡಿಸುವ ಬೆಂಟ್ಲಿ ಆ ಕಾರ್ಯದಲ್ಲಿ ದಾಖಲೆ ಮಾಡುತ್ತಾ ಹೋಗುವಾಗ ಲೆಕ್ಕದಲ್ಲಿ ಅವು 199 ಆಗುತ್ತವೆ. ಮುಂದೆ 200 ಮದುವೆ ಎಂದಾಗ, ಅದು ಆತನದೇ ಆಗಿರುತ್ತದೆ..
ಲೂಸ್ ಮಾದ ಯೋಗಿ ಅವರ ಧ್ವನಿಯಲ್ಲಿ ಚಿತ್ರದ ವಿವರಗಳು ಬರುವಾಗಲೇ ಬೆಂಟ್ಲಿಯ ಸಾಹಸದ ವರಸೆಗಳು ಗೋಚರವಾಗುತ್ತಾ ಹೋಗುತ್ತವೆ.
ಆಗಲೇ ಅಲ್ಲೊಂದು ಪ್ರೇಮ ಇಣುಕುತ್ತದೆ. ಎರಡೇ ನೋಟ ಮತ್ತು ಕೃತಿಗಳಲ್ಲಿ ಅದು ಗಟ್ಟಿಯಾಗಿ ಬಿಡುತ್ತದೆ. ಅಮೆರಿಕಾದಲ್ಲಿ ಬೆಳೆದ ಹುಡುಗಿ ಪಕ್ಕಾ ಸ್ಥಳೀಯ ಹುಡುಗಿಯಂತೆ ಚಿಂತಿಸುತ್ತಾಳೆ. ಮೈ ಮನದ ತುಂಬೆಲ್ಲಾ ಪ್ರೇಮವನ್ನು ಆವರಿಸಿಕೊಳ್ಳುವಷ್ಟರಲ್ಲಿ ಹಾಡು ರಂಜಿಸಿ ಪುಳಕ ನೀಡಿರುತ್ತದೆ.
ಮುಂದೆ ಆಕೆಯ ಮನೆಯ ಕಥೆ. ಜಮೀನ್ದಾರ ಕುಟುಂಬದ ಶ್ರೀಮಂತಿಕೆ; ಆಸೆಗಳು ಮತ್ತು ದುಷ್ಟ ವರಸೆಗಳು. ಮೇಲೆ ಒಳ್ಳೆಯವನಂತೆ ಮತ್ತು ಆಳದಲ್ಲಿ ದುಷ್ಟತನ ಮೈಗೂಡಿಸಿಕೊಂಡಿರುವ ಹುಡುಗಿಯ ಚಿಕ್ಕಪ್ಪ ಮುಂದಿನ ಕಥೆಯ ಕೇಂದ್ರ ಬಿಂದು..!

ಮಹಾಲಕ್ಷ್ಮಿ (ಶೃತಿ) ಹೆಸರಿಗೆ ತಕ್ಕಂತಹ ಗುಣ. ಆದರೆ ಬಹಳ ಸಮಯ ಮಕ್ಕಳಿಲ್ಲದ ಕೊರತೆ ಎದುರಿಸುವುದರಿಂದ ನೂರಾರು ಕೋಟಿ ಒಡತಿಗೆ ದುಃಖ ತಪ್ಪಿದ್ದಲ್ಲ. ಆಕೆಯ ಪತಿ ಚರಣ್ ರಾಜ್ ಇಬ್ಬರದೂ ಆದರ್ಶ ದಾಂಪತ್ಯ.
ಈ ದಂಪತಿಗೆ ಮಕ್ಕಳಿಲ್ಲದ ಕೊರತೆ ನೀಗುವುದು ಚರಣ್ ರಾಜ್ ಸಹೋದರ ದೇವಯ್ಯ (ಬ.ಲ.ರಾಜವಾಡಿ). ಮಹಾಲಕ್ಷ್ಮಿ ಒಂದು ದಿನ ಗರ್ಭಿಣಿಯಾಗುತ್ತಾಳೆ ಮಾತ್ರವಲ್ಲ; ಇಡೀ ಆಸ್ತಿಯನ್ನು ಹೊಟ್ಟೆಯಲ್ಲಿರುವ ಮಗುವಿನ ಹೆಸರಿಗೆ ಬರೆಯುತ್ತಾಳೆ..
ಆಗ ದೇವಯ್ಯನಲ್ಲಿ ಭುಗಿಲೇಳುತ್ತದೆ ವೈಷಮ್ಯ..!
ಆದರೆ ಆತ ಮೇಲೆ ಒಳ್ಳೆತನದ ಸೋಗು ಹಾಕುತ್ತಾನೆ. ಮಹಾಲಕ್ಷ್ಮಿ ಯನ್ನು ಕೊಂದು ತನ್ನ ಸುತ್ತ ತಾನೇ ಕೆಟ್ಟ ವ್ಯೂಹ ರಚಿಸಿಕೊಳ್ಳುತ್ತಾನೆ.
ಕೊನೆ ಕೊನೆಗೆ ಪ್ರೇಮದಲ್ಲಿ ತಹತಹಿಸುವ ಬೆಂಟ್ಲಿ, ಆನಂತರ ದೇವಯ್ಯನ ಸಾಮ್ರಾಜ್ಯವನ್ನು ಕುಟ್ಟಿ ಪುಡಿ ಮಾಡುತ್ತಾನೆ.
ಇದು ದಿವಂಗತ ಆನೇಕಲ್ ಬಾಲರಾಜ್ ಹಾಗೂ ನತದೃಷ್ಟ ಯುವಕ ದಿವಂಗತ ಸಂತೋಷ್ ಬಾಲರಾಜ್ ಅವರ ಕೊನೆಯ ಚಿತ್ರ. ಹಾಗಾಗಿಯೇ ಅವರಿಬ್ಬರ ಅನುಪಸ್ಥಿತಿಯಲ್ಲಿ ಸಾಕಷ್ಟು ಕೊರತೆಗಳು ಕಾಣಿಸುತ್ತವೆ.
ಡಬ್ಬಿಂಗ್ ನ ಅನೇಕ ನ್ಯೂನತೆಗಳನ್ನು ಜ್ಯೂಡೋಸ್ಯಾಂಡಿ ಅವರ ಹಿನ್ನೆಲೆ ಸಂಗೀತ ಮುಚ್ಚಿ ಹಾಕುತ್ತದೆ. ಸಂತೋಷ್ ಬಾಲರಾಜ್ ಬಿಟ್ಟು ಹೋದ ಚಿತ್ರವನ್ನು ಅವರ ಸಹೋದರಿ ಶ್ವೇತಾ ಬಾಲರಾಜ್ ಮತ್ತು ಅವರ ಪತಿ ಮತ್ತು ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಶೋಕ್ ಕುಮಾರ್ ಆಸಕ್ತಿಯಿಂದ ಮಾಡಿ ಮುಗಿಸಿ ಪ್ರೇಕ್ಷಕರ ಮುಂದೆ ತಂದಿದ್ದಾರೆ.

ಸಂತೋಷ್ ಬಾಲರಾಜ್ ಮಧ್ಯಂತರದ ನಂತರ ಕೊಂಚ ಕಾಣೆಯಾದರೂ ಆನಂತರ ಸಾಹಸ ದೃಶ್ಯಗಳಲ್ಲಿ ಅಬ್ಬರಿಸುತ್ತಾರೆ. ನಟನೆ ಮತ್ತು ಸಾಹಸದಲ್ಲಿ ಗಮನ ಸೆಳೆಯುತ್ತಾರೆ.
ಬ.ಲ.ರಾಜವಾಡಿ ಇಡೀ ಚಿತ್ರವನ್ನು ಆವರಿಸಿಕೊಂಡು ಗಮನ ಸೆಳೆಯುತ್ತಾರೆ. ಶೃತಿ ಇರುವ ಅವಕಾಶವನ್ನು ಸದುಪಯೋಗ ಮಾಡಿಕೊಂಡಿದ್ದಾರೆ. ನಟಿ ಸಿಮ್ರಾನ್ ನಟೇಕರ್ ಮುದ್ದಾಗಿ ಕಾಣುತ್ತಾರೆ. ಚರಣ್ ರಾಜ್, ವಾಣಿಶ್ರೀ, ಅಶೋಕ್ ಕುಮಾರ್ ಮೊದಲಾವರ ನಟನೆ ಗಮನಾರ್ಹ..
ಜ್ಯೂಡೋಸ್ಯಾಂಡಿ ಸಂಗೀತ, ಕೃಷ್ಣಕುಮಾರ್ ಮತ್ತು ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ ಚಿತ್ರಕ್ಕೆ ಪೂರಕ..
















