
* ಇದೇ ವಾರ (ಸೆ.25) ಬಿಡುಗಡೆ *
ಬ್ಯಾಂಕ್ ದಿವಾಳಿತನದ ಸುತ್ತಲೂ ಕಥೆ ಹೆಣೆಯಲಾಗಿರುವ ಆಕ್ಷನ್ ಥ್ರಿಲ್ಲರ್ ಚಿತ್ರ ‘ಸ್ಪಾರ್ಕ್’ ಇದೇ ವಾರ ಅಂದರೆ ಸೆಪ್ಟೆಂಬರ್ 25ರಂದು ಬಿಡುಗಡೆ ಕಾಣುತ್ತಿದ್ದು, ಕೊನೆಯ ಕ್ಷಣದಲ್ಲಿ ನಿರ್ಮಾಪಕರ ಪುತ್ರ ರಂಗ ಪ್ರವೇಶ ಮಾಡಿದ್ದಾರೆ.
ಅಭಯ್ ವಸಿಷ್ಠ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರದ ವೈಶಿಷ್ಟ್ಯ ಟ್ರೈಲರ್ ನಲ್ಲಿ ಅನಾವರಣಗೊಂಡಿದೆ. ಅಂದ ಹಾಗೆ ಅಭಯ್ ವಸಿಷ್ಠ ನಿರ್ಮಾಪಕ ಗರಿಮಾ ಅವಿನಾಶ್ ಅವರ ಪುತ್ರ.

ವಿದೇಶಿ ರಂಗಭೂಮಿ ಪರಿಣಿತರಾದ ಅಭಯ್ ‘ಸ್ಪಾರ್ಕ್’ ನಲ್ಲಿ ವಿಲನ್ ಶೆಡ್ ಮೂಲಕ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಸ್ಪಾರ್ಕ್ ಎಂದರೆ ಕಿಡಿ ಅದು ಏನು ಎಂಬುದಕ್ಕೆ ಚಿತ್ರದಲ್ಲೇ ಉತ್ತರ ಸಿಗುತ್ತದೆ ಎಂಬ ವಿವರ ನೀಡಿತು ತಂಡ.
ಮುಖ್ಯ ಪಾತ್ರದಲ್ಲಿರುವ ನಿರಂಜನ್ ಸುಧೀಂದ್ರ, ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲವ್ಲಿಸ್ಟಾರ್ ಪ್ರೇಮ್, ನಿರ್ದೇಶಕ ಮಹಾಂತೇಶ ಹಂದ್ರಾಳ ಹಾಗೂ ಇತರರು ಈ ಸಂದರ್ಭದಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಟ್ರೈಲರ್ ಗದಗ್ ನ ದೊಡ್ಡ ಸಮಾರಂಭದಲ್ಲಿ ಬಿಡುಗಡೆಗೊಂಡಿತ್ತು. ನಿರಂಜನ್ ಸುಧೀಂದ್ರ ಅವರ ಚಿಕ್ಕಪ್ಪ ರಿಯಲ್ ಸ್ಟಾರ್ ಉಪೇಂದ್ರ ಅದನ್ನು ಬಿಡುಗಡೆ ಮಾಡಿದ್ದರು.
ಮತ್ತೆ ಟ್ರೈಲರ್ ಮಾಧ್ಯಮಗಳಿಗೆ ತೋರಿಸುವ ಸಲುವಾಗಿ ಬಂದಿದ್ದ ಚಿತ್ರತಂಡ, ವಿದೇಶದಲ್ಲಿ ಬೆಳೆದು ಚಿತ್ರದ ಭಾಗವಾಗಿರುವ ಅಭಯ್ ವಸಿಷ್ಠ ಅವರನ್ನು ಪರಿಚಯಿಸಿತು.

ನಾನು ಬೇರೆ ಶೇಡ್ ನಲ್ಲಿ ಕಾಣಿಸಿಕೊಂಡರೂ ಅದು ನಿರಂತರವಲ್ಲ; ಪಾತ್ರಗಳಲ್ಲಿ ವೈವಿಧ್ಯತೆ ಕಾಣುವ ಹಂಬಲ ಮತ್ತು ಹೊಸತನದ ಹುಡುಕಾಟ ನಡೆಸಿರುವೆ ಎಂದವರು ಲವ್ಲಿಸ್ಟಾರ್ ಪ್ರೇಮ್.
ಪತ್ರಕರ್ತನ ಪಾತ್ರ ಅಂದರೆ ನಿಮ್ಮ ಪಾತ್ರವನ್ನು ನಿರ್ವಹಿಸಿರುವೆ. ಒಂದು ಹಂತದಲ್ಲಿ ರೋಷಾವೇಶ ಉಕ್ಕಿದಾಗ ಸಮಾಜದ ಪರ ಹೋರಾಡಲೇ ಬೇಕಾಗುತ್ತದೆ ಎಂದರು ನಿರಂಜನ್ ಸುಧೀಂದ್ರ.

ನಿರ್ಮಾಪಕರು ಕೇಳಿದ್ದನ್ನೆಲ್ಲಾ ಕೊಟ್ಟರು, ಹಾಗಾಗಿ ಉತ್ತಮ ಚಿತ್ರ ಕಣ್ಣ ಮುಂದೆ ಇದೆ ಎಂಬ ಉತ್ತರ ನೀಡಿದವರು ನಿರ್ದೇಶಕ ಮಹಾಂತೇಶ ಹಂದ್ರಾಳ..
ನಟ ಧರ್ಮಣ್ಣ ಕಡೂರು, ಕಾರ್ಯಕಾರಿ ನಿರ್ಮಾಪಕ ವಿಶ್ವಾಸ್ ಎಮ್. ನಾಯರ್ ಉಪಸ್ಥಿತರಿದ್ದರು.
















