ಪುನೀತ್ ರಾಜ್‍ಕುಮಾರ್
‘ಭಾರತೀಯ ಚಿತ್ರರಂಗದ ದಂತಕಥೆಯಾಗಿರುವ ಪ್ರಭುದೇವ ಅವರ ಜೊತೆ ಹೆಜ್ಜೆ ಹಾಕಲು ಸಿಕ್ಕ ಸಮಯ ನನ್ನ ಪಾಲಿಗೆ ಅದ್ಭುತ ಕ್ಷಣಗಳು..’
ಹೀಗೆ ಪ್ರತಿಕ್ರಿಯೆ ನೀಡಿ ನಕ್ಕರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಅವರು ಡ್ಯಾನ್ಸ್ ಅದ್ಭುತ..! ಇಂಡಿಯನ್ ಮೈಕಲ್ ಜಾಕ್ಸನ್, ಎಲುಬಿಲ್ಲದ ಅದ್ಭುತ ಎಂದೆಲ್ಲಾ ಕರೆಸಿಕೊಳ್ಳುತ್ತಾರೆ. ಅಂತಹ ಲೆಜೆಂಡರಿ ಡ್ಯಾನ್ಸರ್ ಜೊತೆ ಹೆಜ್ಜೆ ಹಾಕಿದ್ದು ನನ್ನ ಪುಣ್ಯ ಎಂದು ನಕ್ಕರು ಪವರ್ ಸ್ಟಾರ್.

ನೀವು ಕೂಡ ಅದ್ಭುತ ಡ್ಯಾನ್ಸರ್ ಅಲ್ಲವೇ.. ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಪುನೀತ್ ರಾಜ್ ಕುಮಾರ್, ಇರಬಹುದು; ಆದರೆ ಅವರು ಜಗಮೆಚ್ಚಿದವರು ಅಲ್ಲವೇ.. ಅಂತಹವರ ಜೊತೆ ಹೆಜ್ಜೆ ಹಾಕುವುದೇ ಪೂರ್ವ ಜನ್ಮದ ಪುಣ್ಯ ಎಂದು ತಮ್ಮ ಸರಳತೆ ಮತ್ತು ವಿನಮ್ರತೆಯನ್ನು ಎತ್ತಿ ಹಿಡಿದರು.
ಪ್ರಭುದೇವ ಅವರ ಸಹೋದರ ನಾಗೇಂದ್ರ ಪ್ರಸಾದ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹಾಡಿನ ಒಂದು ಭಾಗಕ್ಕೆ ನನ್ನನ್ನು ಕರೆದರು. ಪ್ರಭುದೇವ ಅವರ ಜೊತೆ ನೃತ್ಯ ಮಾಡುತ್ತೇನೆ ಎಂದಾಗ ಥ್ರಿಲ್ ಆದೆ. ಆ ಕ್ಷಣಗಳು ನಿಜಕ್ಕೂ ಮರೆಯಾಗದ ಸಮಯವಾಗಿ ನನ್ನೊಳಗೆ ದಾಖಲಾಗಿದೆ ಎಂದರು ಪವರ್ ಸ್ಟಾರ್.

ಅಂದ ಹಾಗೆ ಡಾರ್ಲಿಂಗ್ ಕೃಷ್ಣ ಮುಖ್ಯ ಪಾತ್ರದಲ್ಲಿರುವ ಲಕ್ಕಿಮ್ಯಾನ್ ಚಿತ್ರದಲ್ಲಿ ಈ ಇಬ್ಬರು ಪ್ರಸಿದ್ಧ ನೃತ್ಯಪಟುಗಳು ಹೆಜ್ಜೆ ಹಾಕಿದ್ದು ಅಭಿಮಾನಿಗಳ ಪಾಲಿಗೆ ಸಂಭ್ರಮದ ಕ್ಷಣವಾಗಿ ದಾಖಲಾಗಿದೆ.
🖋ಸ್ನೇಹಪ್ರಿಯ ನಾಗರಾಜ್
















