ಈಚೆಗೆ ಪ್ರಮುಖವಾದ ‘ಯಲ್ಲಮ್ಮ ಹಾಡು..’ ಹಾಗೂ ಟ್ರೈಲರ್ ಬಿಡುಗಡೆ ಕಂಡು ಗಮನ ಸೆಳೆದಿದೆ ಹಾಗೂ ಚಿತ್ರವು ಇದೇ 15 ರಂದು ಬಿಡುಗಡೆ ಕಾಣುತ್ತಿದೆ. ‘ಮಾರಕಾಸ್ತ್ರ’ ಖ್ಯಾತಿಯ ಗುರುಮೂರ್ತಿ ಸುನಾಮಿ ನಿರ್ದೇಶನದ ಈ ಚಿತ್ರವನ್ನು ಹೊಟೇಲ್ ಉದ್ಯಮಿ ಪೋಲಾ ಪ್ರವೀಣ್ ನಿರ್ಮಾಣ ಮಾಡಿದ್ದಾರೆ.
ಚಿತ್ರದ ಹಾಡು ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಶ್ರವಣ ಬೆಳಗೊಳದ ಶಾಸಕ ಸಿ.ಎನ್ ಬಾಲಕೃಷ್ಣ ಹಾಗೂ ಸಾಯಿ ಸತೀಶ್ ದೊಡ್ಡಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.
ಮಹಾಭಾರತದಲ್ಲಿ ಬರುವ ‘ಶಿಖಂಡಿ’ ನಿಜವಾಗಿ ಏನು ಎಂಬುದರ ಕಥಾಹಂದರ ಹೊಂದಿರುವ ಚಿತ್ರವು ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿದೆ.

ಯುವರಾಜ್ ಗೌಡ ಹಾಗೂ ಖ್ಯಾತಿ ಮುಖ್ಯ ಪಾತ್ರದಲ್ಲಿರುವ ಈ ಚಿತ್ರದಲ್ಲಿ ವಿಶೇಷ (ಮಂಗಳ ಮುಖಿ) ಪಾತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಘವೇಂದ್ರ (ರಾಘು) ನಟಿಸಿದ್ದಾರೆ.
ನಿಖಿತಾ ಸ್ವಾಮಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ನೀತು, ವೇದಾ ಹಾಗೂ ಬಳ್ಳಾರಿಯ ಚಾಂದಿನಿ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ.
ಬಿಡುಗಡೆಯಾದ ‘ಯಲ್ಲಮ್ಮ ತಾಯಿ’ ಹಾಡು ಚಿತ್ರ ನಿರ್ಮಾಣಕ್ಕೆ ಪ್ರೇರಣೆ ಎಂದರು ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್. ಈ ಗೀತೆಯನ್ನು ಸಂಗೀತ ನಿರ್ದೇಶಕ ಮಂಜು ಕವಿ ರಚಿಸಿದ್ದಾರೆ.
‘ಮಾರಕಾಸ್ತ್ರ’ ಬಳಿಕ ಇದು ಎರಡನೇ ಚಿತ್ರ. ಶೀರ್ಷಿಕೆ ಬಗ್ಗೆ ವಿಭಿನ್ನ ಅಭಿಪ್ರಾಯಗಳು ಹೊರ ಬಂದವು. ಕೊನೆಗೆ ಇದೇ ಚಿತ್ರದ ಶಕ್ತಿಯಾಗಿದೆ ಎಂದರು ನಿರ್ದೇಶಕ ಗುರುಮೂರ್ತಿ.
ನಿರ್ಮಾಪಕರ ಪತ್ನಿ ಪೋಲಾ ಲಕ್ಷ್ಮೀ ಅವರಿಗೆ ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಬೇಕೆಂಬ ಆಕಾಂಕ್ಷೆ. ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್ ಪುತ್ರ ಕರಣ್, ಸೊಸೆ ಹಾಗೂ ಮಗಳು ನಮ್ರತಾ ಹಾಜರಿದ್ದರು.
















