
ಇದೊಂದ ಕೌಟುಂಬಿಕ ಸಂದೇಶ ಸಾರುವ ಮನರಂಜನಾತ್ಮಕ ಚಿತ್ರ. ಆದರೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು\ಎ ಪ್ರಮಾಣ ಪತ್ರ ನೀಡಿದೆ. ಸಂಪೂರ್ಣ ಮನರಂಜನೆಗೆ ‘ಎ’ ಏಕೆ ಬಂತು ಎಂಬುದಕ್ಕೆ ಚಿತ್ರದಲ್ಲಿಯೇ ಉತ್ತರವಿದೆ ಎಂಬ ಸಂದೇಶ ನೀಡಿತು ಚಿತ್ರತಂಡ.
ಅದು ಅಮರ್ಥ..!
ಕಿರು ತೆರೆಯಲ್ಲಿ ಅತ್ಯಂತ ಕ್ರಿಯಾಶೀಲರಾಗಿರುವ ಗುರು ಹೆಗ್ಡೆ ನಿರ್ದೇಶನವಿರುವ ಚಿತ್ರ. ಚಿತ್ರದಲ್ಲಿ ಹಾಡಿನ ಮೂಲಕ ಗಮನ ಸೆಳೆದ ತಂಡ, ಮುಖ್ಯ ಪಾತ್ರದಲ್ಲಿರುವ ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಅವರ ಸಹಕಾರದ ಔದಾರ್ಯಗಳನ್ನು ಹೆಚ್ಚು ಕೊಂಡಾಡಿತು.

ಒಂದು ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಅದೇ ಶಾಲೆಯ ಬೆಳವಣಿಗೆ ಹಾದಿಯಲ್ಲಿ ಹೇಗೆ ಜೊತೆ ಜೊತೆಗೆ ಸಾಗುತ್ತಾರೆ. ಅಲ್ಲಿ ಬರುವ ತಿರುವುಗಳು ಏನೆಲ್ಲಾ ಬದಲಾವಣೆ ಮಾಡುತ್ತವೆ ಎಂಬುದು ಮೇಲ್ನೋಟಕ್ಕೆ ಕಾಣುವ ಚಿತ್ರ ಸಾರ. ಆದರೆ ನಿಜವಾಗಿ ಅದಲ್ಲ ಚಿತ್ರದೊಳಗೇ ಎದ್ದು ಕಾಣುವ ಬದಲಾವಣೆಯೊಂದು ಡ್ರಿಲ್ಲಿಂಗ್ ಅಂಶವಾಗಿ ನಿಲ್ಲುತ್ತದೆ ಎಂಬ ಸಮರ್ಥನೆಯೂ ಬಂತು.
ಪಂಚರಂಗಿ ಫಿಲಂಸ್ ಲಾಂಛನದಲ್ಲಿ ಡಾ.ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ ನಿರ್ಮಿಸಿರುವ, ಗುರು ಹೆಗ್ಡೆ ಹಾಗೂ ವಿನಯ್ ಪ್ರೀತಮ್ ಜಂಟಿ ನಿರ್ದೇಶನದ ಹಾಗೂ ಶ್ರೀನಗರ ಕಿಟ್ಟಿ-ಮೇಘನಾರಾಜ್ ಮುಖ್ಯ ಪಾತ್ರದಲ್ಲಿರುವ ‘ಅಮರ್ಥ’ ಚಿತ್ರವು ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈಚೆಗೆ ನಡೆದ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಹಾಗೂ ಮಾಧ್ಯಮಗೋಷ್ಠಿಯಲ್ಲಿ ಹಿರಿಯ ನಟ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಸುಂದರರಾಜ್, ಚಿತ್ರದ ಬಿಡುಗಡೆ ದಿನಾಂಕ ಹೊಂದಿದ್ದ ಮೋಷನ್ ಪೋಸ್ಟರ್ ಅನಾವರಣ ಮಾಡಿದರು.
ಕಲಾವಿದನಾಗಿ ಎರಡು ದಶಕಗಳು ಕಳೆದಿವೆ. ಈಗ ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶನ ಮಾಡುವ ಅವಕಾಶ ಬಂದಿದೆ ಎಂದರು ಗುರು ಹೆಗ್ಡೆ. ಆದರೆ ವಿನಯ್ ಪ್ರೀತಮ್ ಜೊತೆಗೂಡಿ ನಿರ್ದೇಶನದ ಹೊಣೆ ಹೊತ್ತಿರುವುದು ವಿಶೇಷ. ಸುಮಾರು ಎರಡು ವರ್ಷಗಳಿಂದ ಚಿತ್ರದ ಕೆಲಸಗಳು ನಡೆಯುತ್ತಾ ಬಂದಿವೆ. ಈಗ ಬಿಡುಗಡೆಯ ಈ ಹಂತದಲ್ಲಿ ಎಲ್ಲರ ಸಹಕಾರಕ್ಕೆ ಹೆಚ್ಚು ಖುಷಿಯಾಗಿದೆ ಎಂದು ಹೇಳುತ್ತಾ ಹೋದರು ಗುರು ಹೆಗ್ಡೆ.

ನಮ್ಮೆಲ್ಲರನ್ನು ಮೀರಿದ ಶಕ್ತಿ ಜೀವನದಲ್ಲಿ ಅನೇಕ ತಿರುವುಗಳಿಗೆ ಕಾರಣವಾಗಿ ಬಿಡಬಹುದು. ಅದನ್ನೇ ಇಲ್ಲಿ ಅಮರ್ಥ ಎಂದು ಕರೆಯಲಾಗಿದೆ. ಚಿತ್ರದಲ್ಲಿ ಕೃತಿ ಶೆಟ್ಟಿ, ಉಷಾ ಭಂಡಾರಿ, ಮಂಜು ಭಾಷಿಣಿ, ಗುರು ಹೆಗ್ಡೆ, ತಮ್ಮಣ್ಣ ಶೆಟ್ಟಿ ಹಾಗೂ ಇನ್ನಿತರರು ತಾರಾಬಳಗದಲ್ಲಿದ್ದು ಚಿತ್ರದ ಭಾಗವಾಗಿದ್ದಾರೆ.
ಗುರುಪ್ರಶಾಂತ್ ರೈ ಛಾಯಾಗ್ರಹಣ, ಶಿನಾಯ್ ವಿ ಜೋಸೆಫ್, ಪಂಚಮ್ ಜೀವ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್, ಬಲರಾಮ್ ಹಾಗೂ ರಾಕೇಶ್ ಆಚಾರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮಂಗಳೂರು ಹಾಗೂ ಬೆಂಗಳೂರಿನಲ್ಲಿ 48 ದಿನಗಳ ಕಾಲ ಚಿತ್ರೀಕರಣ ನಡೆದಿದೆ ಅತ್ಯುತಮ ಆಶಯದ ಜೊತೆಗೆ ಇದೇ ಸೆಪ್ಟೆಂಬರ್ 18 ರಂದು ನಿಮ್ಮ ಮುಂದೆ ಬರಲಿದೆ ಎಂದರು ನಿರ್ದೇಶಕ ವಿನಯ್ ಪ್ರೀತಮ್.
ಇದು ಒಂದು ಮುದ್ದಾದ ಕಥೆ. ಎಲ್ಲರಿಗೂ ಪ್ರಿಯವಾಗುವ ಕಥೆಯೂ ಹೌದು. ಬಾಲ್ಯದಿಂದ ಒಬ್ಬ ಹುಡುಗನ ಜರ್ನಿ ಹೇಗಿರುತ್ತದೆ ಎಂಬುದರ ಸುತ್ತ ಕಥೆ ಸಾಗುತ್ತದೆ. ಚಿತ್ರಕಥೆ ಕೂಡ ಬಹಳ ಸೊಗಸಾಗಿದೆ. ನನ್ನ ಪಾತ್ರದ ವಿವರಗಳು ನಿಗೂಢ ಎಂದರು ಶ್ರೀನಗರ ಕಿಟ್ಟಿ.

‘ಬಹು ಪರಾಕ್’, ‘ಬುದ್ದಿವಂತ ೨’ ಚಿತ್ರಗಳ ನಂತರ ಈ ಕಿಟ್ಟಿ ಮತ್ತು ನಾನು ಈ ಚಿತ್ರದಲ್ಲಿ ನಟಿಸಿದ್ದೇವೆ ಎಂದರು ನಟಿ ಮೇಘನಾ ರಾಜ್. ನಾನು ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರದ ಕುರಿತಾದ ಕೆಲವು ವಿಷಯಗಳನ್ನು ಹಂಚಿಕೊಂಡಾಗ ಎಲ್ಲರೂ ಯಾವಾಗ ಬಿಡುಗಡೆ ಎಂದು ಕೇಳುತ್ತಿದ್ದರು. ಕೊನೆಗೂ ಆ ಸಮಯ ಬಂದಿದೆ ಎಂದರು.
ಚಿತ್ರದಲ್ಲಿ ನಟಿಸಿರುವ ತಮ್ಮಣ್ಣ ಶೆಟ್ಟಿ, ಕೃತಿ ಶೆಟ್ಟಿ, ಅಶ್ವ ಹಾಗೂ ಸಂಗೀತ ನಿರ್ದೇಶಕ ಪಂಚಮ್ ಜೀವ ಚಿತ್ರದ ಕುರಿತು ಮಾತನಾಡಿದರು.
















