
ರೇಟಿಂಗ್ : 4/5
ನಿರ್ಮಾಣ : ತನುಷ್ ಶಿವಣ್ಣ
ನಿರ್ದೇಶನ : ಲವ ವಿ
ಮೋಹ ಮದ ಮತ್ಸರ
ಅನಾಹುತಗಳಿಗೆ ತತ್ತರ

* ಕ್ಷಣ ಕ್ಷಣವೂ ಬಿಡದ ಕುತೂಹಲ *
* ಸಾಧಕ ವ್ಯಕ್ತಿಯ ಅವಸಾನದ ಚಿತ್ರಣ *
ವ್ಯಕ್ತಿಯೊಬ್ಬ ಸಾಧನೆಯ ಮೆಟ್ಟಿಲುಗಳನ್ನು ಹತ್ತುವ ದಾರಿಯಲ್ಲಿ ಅಡ್ಡಗಾಲು ಹಾಕುವವರೇ ಹೆಚ್ಚು. ಅದರಲ್ಲೂ ‘ಮೆರೆತ’ ಮತ್ತು ಸಾಮಾಜಿಕ ನೆಲೆಯನ್ನು ‘ಮರೆತ’ ವ್ಯಕ್ತಿಯ ಅಧಃಪತನ (ಜೊತೆಗೆ ಬೆರೆತವರಿಂದಲೇ)ದ ಅಪರೂಪದ ಕಥಾ ಹಂದರ..
ತನುಷ್ ಒಂದು ಕ್ಷೇತ್ರದ ಮಹಾನ್ ಸಾಧಕ. ಹಣ ಕೀರ್ತಿ ಜನ ಬೆಂಬಲ ಇರುವ ಆತ ಸಾಮಾಜಿಕ ನೆಲೆಯಲ್ಲಿ ‘ದೊಡ್ಡ ಬಾಸ್’. ಆದರೆ ಆಸೆಗಳನ್ನು ಮೀರದ ಅಥವಾ ಗುಟ್ಟಾಗಿ ಮಾಡುವುದನ್ನು ಬಹಿರಂಗವಾಗಿ ತೆರೆದುಕೊಂಡ ಅಮಾಯಕ..
ಆತನ ಸುತ್ತಲೂ ಇರುವವರು ಆಸೆ ಬುರುಕ ಫಟಿಂಗರು. ಎಂತಹ ನೀಚ ಕೆಲಸವನ್ನೂ ಮಾಡಿ ಮುಗಿಸುವ ಛಾತಿ ಉಳ್ಳವರು. ಅವರ ಶೌರ್ಯ ಪ್ರತಾಪಗಳ ಪರಿಣಾಮ ಬಾಸ್ ಕಾನೂನು ಕತ್ತರಿಯಲ್ಲಿ ಸಿಕ್ಕಿಕೊಳ್ಳುವಂತಾಗುತ್ತದೆ..
ಇದಿಷ್ಟು ಕಥೆಯನ್ನು ಹೇಳಲು ನಿರ್ದೇಶಕ ವಿ.ಲವ ಮಾಮೂಲಿ ಮಾರ್ಗವನ್ನೇ ಆಯ್ದುಕೊಂಡಿದ್ದರೂ ನಿರೂಪಣೆಯಲ್ಲಿ ಬಿಗಿ ಹಿಡಿತ ಮತ್ತು ಅಚ್ಚುಕಟ್ಟಾದ ಹಿನ್ನೆಲೆ ಸಂಗೀತದಿಂದಾಗಿ ಪ್ರೇಕ್ಷಕ ಅತ್ತ ಇತ್ತ ಅಲುಗಾಡುವುದಿಲ್ಲ..
ಅಯ್ಯೋ ಇದು ಓದಿ ಕೇಳಿ ತಿಳಿದುಕೊಂಡು ಗೊತ್ತಿರುವ ಕಥೆಯೇ ಅಲ್ಲವೇ ಎಂದುಕೊಳ್ಳುತ್ತಾ ಚಿತ್ರ ನೋಡುವಾಗ ಕುತೂಹಲ ಮತ್ತು ತಮಾಷೆ ಎರಡೂ ಥ್ರಿಲ್ ನೀಡುತ್ತವೆ. ಥ್ರಿಲ್ ಏಕೆಂದರೆ ಅದರಲ್ಲಿ ಬಳಸಲಾಗಿರುವ ಅನ್ವರ್ಥ ನಾಮದ ಹೆಸರುಗಳು..
ಸಾಮಾಜಿಕ ಪ್ರಜ್ಞೆ ಮತ್ತು ಜವಾಬ್ದಾರಿ ಎರಡನ್ನೂ ಕಳೆದುಕೊಂಡರೆ ಅದು ನರಕದ ದಾರಿ ತೋರಿಸಿಬಿಡಬಲ್ಲದು ಎಂಬುದಕ್ಕೆ ಅತ್ಯುತ್ತಮ ನಿದರ್ಶನ ಎಂಬ ಸಂದೇಶವನ್ನು ಚಿತ್ರವು ಸಾರುತ್ತದೆ..
ಜೊತೆಗೆ ಎಷ್ಟೇ ವಿಶಾಲ ನೆಲೆಯ ಔದಾರ್ಯದ ಗುಣವಿದ್ದರೂ ಸಹವಾಸ ಮತ್ತು ಪ್ರಲೋಭನೆಗೆ ಒಳಪಡಿಸುವ ಸಂಬಂಧಗಳು ವರ್ಚಸ್ಸು ತಿಂದು ಹಾಕುವುದಲ್ಲದೆ ಪ್ರಭಾವೀ ಮನುಷ್ಯನನ್ನು ಅಸಹಾಯಕತೆಗೆ ದೂಡುವ ಮನೋಜ್ಞ ಕಲ್ಪನೆ ಪ್ರೇಕ್ಷಕನ ಹೃದಯ ಕಲಕುತ್ತದೆ..
ಗೊತ್ತಿರುವ ಕಥೆಯೇ ಆದರೂ ಕ್ಷಣ ಕ್ಷಣವೂ ಕುತೂಹಲ ಕೆರಳಿಸುವ ಕ್ರೈಮ್ ಥ್ರಿಲ್ಲರ್ ಈ ದಿನಗಳಲ್ಲಿ ವಿರಳ. ಈ ದೃಷ್ಟಿಯಿಂದ ನಿರ್ದೇಶಕ ಲವ ಅವರ ಜಾಣ್ಮೆಯ ಪ್ರದರ್ಶನ ಎದ್ದು ಕಾಣುತ್ತದೆ.

ಕೊನೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ನಲುಗುವ ಪ್ರಸಿದ್ಧ ವ್ಯಕ್ತಿಯ ಅಧಃಪತನದ ಹಾದಿ ಜೀವ ಹಿಂಡುವಷ್ಟು ಮನೋಜ್ಞವಾಗಿದೆ..
ಮುಖ್ಯ ಪಾತ್ರದಲ್ಲಿರುವ ತನುಷ್ ಶಿವಣ್ಣ ಅಭಿನಯವನ್ನು ಸವಾಲಾಗಿ ತೆಗೆದುಕೊಂಡಿರುವುದರಿಂದ ಚಿತ್ರದಲ್ಲಿ ನೈಜತೆ ಎದ್ದು ಕಾಣುತ್ತದೆ. ಶೀಲ ಪಾತ್ರದಲ್ಲಿರುವ ವಂದಿತಾ ಗೌಡ ಸೌಂದರ್ಯದಿಂದಲೇ ಗಮನ ಸೆಳೆದರೆ, ಪಾಯಲ್ ಚೆಂಗಪ್ಪ ಅವರ ಪಾತ್ರ ಮುಗ್ಧವಾಗಿದೆ.
ಡಿಸಿಪಿ ಪಾತ್ರದಲ್ಲಿ ವಿಜಯ್ ಸ್ಲೀ ಅವರ ಪಾತ್ರ ಗಮನಾರ್ಹ. ಗೆಳೆಯರ ಪಾತ್ರದಲ್ಲಿ ವೀರೇನ್ ಕೇಶವ್ ಹಾಗೂ ಇತರರು ಗಮನ ಸೆಳೆಯುತ್ತಾರೆ. ಶರತ್ ಕ್ಯಾಮೆರಾ ಕೈ ಚಳಕ ಸೊಗಸು, ಡೇವಿ ಸುರೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕ..

















