ಜಾನಪದದಲ್ಲಿ ಬರುವ ವೀರಗಾಸೆ ಕುಣಿತಕ್ಕೆ ಅನನ್ಯ ಮಿಡಿತ ಕಂಡು ಬರುವುದು. ವೀರಗಾಸೆ ನೃತ್ಯ ಹಾಗೂ ವೀರಭದ್ರ ದೇವರ ಐತಿಹಾಸಿಕ ಕಥೆ ಹೇಳುವ ಚಿತ್ರವೇ ರುದ್ರಾಭಿಷೇಕಂ..
ವಿಜಯ ರಾಘವೇಂದ್ರ ಹಾಗೂ ಪ್ರಿಯಾಂಕ ತಿಮ್ಮೇಶ್ ಮುಖ್ಯ ಪಾತ್ರದಲ್ಲಿರುವ ಚಿತ್ರವು ಇದೀಗ ಬಿಡುಗಡೆಗೆ ಸಜ್ಜುಗೊಂಡಿದ್ದು, ಈಚೆಗೆ ಚಿತ್ರದ ಹಾಡು ಬಿಡುಗಡೆಗೊಂಡಿತು. ವಿ.ಮನೋಹರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಹಾಪ್ ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ ಹಾಡು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಈ ಚಿತ್ರದಲ್ಲಿ ವೀರಗಾಸೆ ಕಲಾವಿದ ಅಲ್ಲದೆ, ಇದೇ ಮೊದಲ ಬಾರಿಗೆ ತಂದೆ, ಮಗನಾಗಿ, ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವೀರಗಾಸೆ ಕುಣಿತದ ಪಾತ್ರವು ಅತ್ಯಂತ ಸವಾಲಿನದಾಗಿತ್ತು. ಅಲ್ಲದೆ ದ್ವೀಪಾತ್ರವೂ ದೊಡ್ಡ ಸವಾಲೇ. ಪೂರ್ವಜರ ಕಾಲದ ಕಥೆ ಜೊತೆಗೆ ಈಗಿನ ಕಥೆ ಸೇರಿದೆ. ಇದು ಅತ್ಯಂತ ಡ್ರಿಲ್ಲಿಂಗ್ ಕೊಡುವ ವಿಷಯವೂ ಹೌದು ಎಂದರು ವಿಜಯ ರಾಘವೇಂದ್ರ.

ಚಿತ್ರದಲ್ಲಿ ಹಿರಿಯ ನಟ ಬ.ಲ.ರಾಜವಾಡಿ ಅವರು ಗೌಡರ ಪಾತ್ರದಲ್ಲಿ ಅತ್ಯಾದ್ಭುತ ಅಭಿನಯ ನೀಡಿದ್ದಾರೆ ಎಂಬ ವಿವರಗಳು ಬಂದವು.
ವಿಜಯಪುರದ ಸ್ನೇಹಿತರು ಕೂಡಿ ನಿರ್ಮಿಸಿರುವ ಚಿತ್ರ ಇದು ಎಂದರು ನಿರ್ಮಾಪಕರಲ್ಲಿ ಒಬ್ಬರಾದ ಕೆ.ವೆಂಕಟೇಶ್. ಎಲ್ಲಾ ಹೊಸ ಗಾಯನ ಪ್ರತಿಭೆಗಳು ಈ ಚಿತ್ರದಲ್ಲಿ ಹಾಡಿದ್ದಾರೆ ಎಂದರು ಸಂಗೀತ ನಿರ್ದೇಶಕ ವಿ.ಮನೋಹರ್.
‘ರುದ್ರಾಭಿಷೇಕಂ’ ಪ್ಯಾನ್ ಇಂಡಿಯಾ ಕ್ರಿಯೇಷನ್ಸ್ ಸಂಸ್ಥೆಯ ಮೊದಲ ಚಿತ್ರವಾಗಿದ್ದು, ಮಂಜುನಾಥ ಕೆ.ಎನ್, ಎನ್.ಜಯರಾಮಪ್ಪ, ಕೆ.ವೆಂಕಟೇಶ್, ಬಿ.ಚಿದಾನಂದ ಮೂರ್ತಿ, ಸುರೇಶ್ ಬಾಬು, ಬಿ.ಕೆ.ಅಶ್ವಥ್ ನಾರಾಯಣ, ಶಿವಕುಮಾರ್, ಕೆ.ಎಸ್.ರವಿಕುಮಾರ್, ಕುಸುಮ ವಸಂತ್ ಕುಮಾರ್ ಸೇರಿದಂತೆ 9 ಜನ ನಿರ್ಮಾಪಕರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ದೈವದ ಹಿನ್ನೆಲೆ ಇರುವ ಜನಪದ ಕಲೆಯನ್ನು ನಾಡಿನ ಮೂಲೆ ಮೂಲೆಗೂ ತಲುಪಿಸಬೇಕು ಎಂಬ ಆಶಯದಲ್ಲಿ ಈ ಚಿತ್ರ ನಿರ್ಮಾಣವಾಗಿದೆ ಎಂದರು ನಿರ್ದೇಶಕ ವಸಂತಕುಮಾರ್.
ಈ ಚಿತ್ರಕ್ಕೆ ದೇವನಹಳ್ಳಿ ಸುತ್ತಮುತ್ತ ಹಾಗೂ ಕರಾವಳಿಯ ಗೋಕರ್ಣ, ಹೊನ್ನಾವರ, ಕುಮಟಾ, ಅಬ್ಬಕ್ಕ ಫೋರ್ಟ್ ಅಲ್ಲದೆ ಅಘನಾಶಿನಿ ಹಿನ್ನೀರಿನ ಸ್ಥಳಗಳಲ್ಲಿ ಸುಮಾರು 50ಕ್ಕೂ ಹೆಚ್ಚು ದಿನಗಳ ಕಾಲ ಈ ಚಿತ್ರದ ಮಾತಿನ ಭಾಗ ಹಾಗೂ ಹಾಡುಗಳ ಚಿತ್ರೀಕರಣ ನಡೆಸಲಾಗಿದೆ ಎಂಬ ವಿವರವೂ ಬಂತು ಅವರಿಂದ.
ಬ.ಲ.ರಾಜವಾಡಿ, ವಿ.ಮನೋಹರ್, ಮನು, ಸನತ್, ಬುಲೆಟ್ ವಿನು, ಮಮತಾ ತುರುವೇಕೆರೆ, ನವನಿತಾ ಶೆಟ್ಟಿ, ಮಂಜುಳಾ ಹಾಗೂ ಇತರರು ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಮುತ್ತುರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.
















