ಪತ್ರಕರ್ತರ ಸಾಕ್ಷಿ ಪ್ರಜ್ಞೆ ಸಾಚ ಇನ್ನು ನೆನಪು ಮಾತ್ರ.

ಸಾ.ಚಗೆ ಶ್ರದ್ಧಾಂಜಲಿ —— —— ——- ನಮ್ಮಿಬ್ಬರ ಫೋನು ಅವೇಳೆಯಲ್ಲಿ ರಿಂಗಣಿಸಿದರೆ ಪರಸ್ಪರ ಮಾತಾಡಿಕೊಂಡು ಏನು? ಯಾರು ? ಎಲ್ಲಿ ? ಎಡ್ರಾ ವಂಡಿ….. ನೂರಾರು ಸಾವು -ಬದುಕು ಗಳನ್ನು ಕಟ್ಟಿ ಕೊಟ್ಟವರು ಸಾಚ. ಬದುಕನ್ನು ಕಟ್ಟಿಕೊಡುವುದೇನೊ ಸರಿ,ಸಾವನ್ನು ಕಟ್ಟಿ ಕೊಡುವುದಾದರೂ ಹೇಗೆ  ಅದೇ ಸಾಚ ಸ್ಪೆಷಲ್ ಸತ್ತವರು ಸತ್ತರು ಇರೋರು ಬದುಕಬೇಕಲ್ಲವೇ! ಇದು ಸಾಚ ಉವಾಚ ಹುಟ್ಟುವ ಮಕ್ಕಳಿಗೆ ಸ್ಕೂಲ್ ಪ್ರವೇಶದಿಂದ ಮೊದಲ್ಗೊಂಡು ಸಾಯಲು ಆಸ್ಪತ್ರೆ ಸೇರಿದವರೆಗೆ ಸಾಚ ಬೇಕೇ ಬೇಕು.  ಒಂದು ಸುದ್ದಿಗೆ ಆ…

Share :

ಸಾ.ಚಗೆ ಶ್ರದ್ಧಾಂಜಲಿ
—— —— ——-

ನಮ್ಮಿಬ್ಬರ ಫೋನು ಅವೇಳೆಯಲ್ಲಿ ರಿಂಗಣಿಸಿದರೆ ಪರಸ್ಪರ ಮಾತಾಡಿಕೊಂಡು ಏನು? ಯಾರು ? ಎಲ್ಲಿ ?
ಎಡ್ರಾ ವಂಡಿ…..

ನೂರಾರು ಸಾವು -ಬದುಕು ಗಳನ್ನು ಕಟ್ಟಿ ಕೊಟ್ಟವರು ಸಾಚ. ಬದುಕನ್ನು ಕಟ್ಟಿಕೊಡುವುದೇನೊ ಸರಿ,ಸಾವನ್ನು ಕಟ್ಟಿ ಕೊಡುವುದಾದರೂ ಹೇಗೆ  ಅದೇ ಸಾಚ ಸ್ಪೆಷಲ್
ಸತ್ತವರು ಸತ್ತರು ಇರೋರು ಬದುಕಬೇಕಲ್ಲವೇ! ಇದು ಸಾಚ ಉವಾಚ

ಹುಟ್ಟುವ ಮಕ್ಕಳಿಗೆ ಸ್ಕೂಲ್ ಪ್ರವೇಶದಿಂದ ಮೊದಲ್ಗೊಂಡು ಸಾಯಲು ಆಸ್ಪತ್ರೆ ಸೇರಿದವರೆಗೆ ಸಾಚ ಬೇಕೇ ಬೇಕು.  ಒಂದು ಸುದ್ದಿಗೆ ಆ ಸುದ್ದಿಯಾದ ಸುದ್ದಿಯ ಗುದ್ದಿ ಮತ್ತೊಂದು ಸುದ್ದಿ ಮಾಡಿಸುವುದು ಸಾಚನಿಗೆ ಗೊತ್ತಿಲ್ಲದೇ ನಡೆದು ಹೋಗಿರುತ್ತವೆ.

ಅವರಿಗೆ ಗೊತ್ತಿಲ್ಲದೇ ಇರುವ ವಿದ್ಯೆಯೆ ಇಲ್ಲ ಗೊತ್ತಿಲ್ಲದ ಸೆಲಬ್ರೆಟಿಯೇ ಇಲ್ಲ . ಒಮ್ಮೆ ಅವರ ನಾಲಿಗೆಗೆ ಸಿಕ್ಕಿ ಬಿದ್ದರೆ ಮುಗೀತು ಲೈಫ್ ಲಾಂಗ್ ಅವರನ್ನು ಯಾರೂ ಮರೆಯಲ್ಲ. ಸಾಚ ಕೋಪಕ್ಕಂತೂ ಕಾರಣವೇ ಬೇಕಿಲ್ಲ.  ಒಂದು ರಸವತ್ತಾದ ಪತ್ರಿಕಾ ಸಂವಾದವನ್ನು ರಾಡಿಗೊಳಿಸಬಲ್ಲರು, ತಮಗಿಷ್ಟವಾದ ವ್ಯಕ್ತಿಯಾದರೆ ಆತನಿಗೆ ಅನುಕೂಲವಾಗುವಂತೆ ಪ್ರಶ್ನೆ ರೂಪಿಸುವರು . ಪತ್ರಿಕಾಗೋಷ್ಠಿಗೆ ಮುನ್ನ ‘ಏನಿವಂದು ಬದನೆಕಾಯಿ’ ಎಂದು ನಮ್ಮ ಕಡೆಗೆ ನೋಡುವರು  ಅವರನ್ನು ಏನೇನು ಪ್ರಶ್ನಿಸಿ ಇಕ್ಕಟ್ಟಿಗೆ ಸಿಲುಕಿಸಬಹುದೆಂದು ಪ್ಲಾನ್ ಮಾಡುವರು. ಅದಕ್ಕೆ ಕೆಲವರು ಗಣಪತಿಗೆ ಮೊದಲು ನಮಸ್ಕರಿಸುವಂತೆ ಪತ್ರಿಕಾಗೋಷ್ಠಿಗೆ ಮುನ್ನ  ‘ನಮಸ್ಕಾರ ಚಂದ್ರಣ್ಣ’ ಅಂತ ಹೆಂಗಾದ್ರೂ ಸರಿ ಒಂದು ನಮಸ್ಕಾರ ಹಾಕಿಬಿಟ್ರೆ ಮುಂದಿನದೆಲ್ಲ ಸಲೀಸು,

ಸಾಚ ಅವರನ್ನು ಸಂಭಾಳಿಸುವ ಕಲೆ ಬಂಗಾರಪ್ಪ, ಪಟೇಲ್,ವಿಶ್ವನಾಥ್, ನಾಗೇಗೌಡ,ಎ ಕೃಷ್ಣಪ್ಪ, ಸಿದ್ದರಾಮಣ್ಣ, ಸೋಮಣ್ಣ, ನಾಣಯ್ಯ ಅಂತವರಿಗೆ ಗೊತ್ತಿತ್ತು.

ದೇವೇಗೌಡರು ಎಸ್ ಎಂ ಕೃಷ್ಣ ಅವರಿಗೆ ಇವತ್ತಿಗೂ ಸಾಚ ಒಂಥರ ಕಾಡುವ ಶನಿ !

ದೇವೇಗೌಡರ ಸೋನೆ ಮಳೆಯಂತಹ ಮಾತಿನ ಮಧ್ಯೆ ಸಾಚ ಪ್ರಶ್ನೆ ಕೇಳಲು ಎದ್ದು ನಿಂತರೆ ಸಾಕು ಗೌಡರ ಪಿತ್ತ ನೆತ್ತಿಗೇರುವುದು  ‘ ಇರು ಗುರು ಒಂದ್ನಿಮಿಷ ‘ ಸಾಚ ಬಡಪಟ್ಟಿಗೆ ಬಗ್ಗುವರಲ್ಲ.ಅವರ ಪ್ರಶ್ನೆಗೆ ಸಮಂಜಸವಾಗಿ ಉತ್ತರಿದೇ ಯಾರೂ ತಪ್ಪಿಸಿಕೊಂಡು ಹೋದ ಉದಾಹರಣೆಗಳಿಲ್ಲ. ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ನೇರವಾಗಿ  ಪ್ರಶ್ನೆ ಮಾಡುತ್ತಿದ್ದ ಏಕೈಕ ಪತ್ರಕರ್ತ ಸಾ ಚ .

ಅದೇ ಎಸ್ಎಂಕೆ ಸಾಚ ಅವರ ಉದ್ದನೆಯ ಪ್ರಶ್ನೆಗೆ ಉತ್ತರಿಸಲಾಗದೇ ‘ನೆಕ್ಸ್ಟ್ ಕ್ವಶ್ಚನ್ ಪ್ಲೀಸ್ ‘ ಎಂದು ತಪ್ಪಿಸಿಕೊಳ್ಳಲು ವಿಫಲ ಪ್ರಯತ್ನ ನಡೆಸುತ್ತಿದ್ದರು. ಹಲೋ ಮುಖ್ಯಮಂತ್ರಿಗಳೇ ನನ್ನ ಪ್ರಶ್ನೆ ಇನ್ನೂ ಜೀವಂತವಾಗಿದೆ ಅಂದ್ರೆ ನಿಮ್ಮ ಉದ್ದನೆಯ ಪ್ರಶ್ನೆಯಲ್ಲೇ ಉತ್ತರ ಅಡಗಿದೆ ಮಿ ಚಂದ್ರಶೇಖರ್ ಅವರೇ ಎಂದು ಟೆಕ್ನಿಕಲ್ ಪಾಯಿಂಟ್ ರೈಸ್ ಮಾಡಿ ತಪ್ಪಿಸಿಕೊಳ್ಳುವ ಹಾದಿ ಕಂಡುಕೊಳ್ಳೂತಾತಿದ್ದರು.
ಯಮನ ಕೈಯಲ್ಲಿ ತಪ್ಪಿಸಿಕೊಂಡು ಬಂದವರೂ ಸಾಚ ಕೈಯಲ್ಲಿ ಸಿಕ್ಕಿಬಿಡುತ್ತಿದ್ದರು. ಸಾಚ ಅವರ ಪ್ರಶ್ನೆಯನ್ನು ನಿಭಾಯಿಸಲು ಇವರಿಂದ ಸಾಧ್ಯವಾಗಲೇ ಇಲ್ಲ.

ಅದೇ ಬಂಗಾರಪ್ಪ ಅವರು  ‘ ಎಲ್ರೀ ಚಂದ್ರಶೇಖರ್ ಕಮಾನ್ ‘ ಎಂದು ಮೊದಲ ಪ್ರಶ್ನೆಗಾಗಿ ಸಾಚರನ್ನು ತಾವೇ ಆಹ್ವಾನಿಸುತ್ತಿದ್ದರು. ಅದಕ್ಕೂ ಮೊದಲು ಚಂದ್ರಶೇಖರ್ ಗೆ ಕನ್ನಡ ಪ್ರೆಸ್ ನೋಟ್ ಕೊಟ್ಟಿದೀರಿ ತಾನೇ ಎಂದು ವಿಚಾರಿಸಿಕೊಳ್ಳುತ್ತಿದ್ದರು. ಇಲ್ಲ ಅಂದ್ರೆ ಅದೇ ಮುಖ್ಯ ಪ್ರಶ್ನೆಯಾಗಿ ನಿಜವಾಗಿಯೂ ಸುದ್ದಿ ಯಾಗಬೇಕಾದ ಸುದ್ದಿ ಹಿನ್ನೆಲೆಗೆ ಸರಿದು ಬಿಡುತ್ತಿತ್ತು. ಏನಾದರೂ ಅಕಸ್ಮಾತ್ ಇಂಗ್ಲಿಷ್ ನಲ್ಲಿ ಪ್ರೆಸ್ ನೋಟ್ ಇದ್ದರಂತೂ ಮುಗಿದೇ ಹೋಯ್ತು  ‘ ಯಾವ ದೇಶದ ಜನರಿಗೆ ಇದನ್ನು ತಲುಪಿಸಬೇಕು ‘ ಎಂದು ಕೆರಳಿ ಪ್ರೆಸ್ ನೋಟನ್ನೇ ಹರಿದು ಬಿಸಾಡಿ ಬಿಡುತ್ತಿದ್ದರು .ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಸನ ಬದ್ದ ಅಧಿಕಾರ ಕೊಡಿಸಿದ್ದು ಸಾಚ , ಎಂಜಿ ರಸ್ತೆಯಲ್ಲಿ ಕನ್ನಡ ಫಲಕಗಳಿಗೆ ಅವಕಾಶ ಸಿಕ್ಕಿದ್ದು ಸಾಚ ಅವರ ಪ್ರಶ್ನೆಗಳಿಂದ. ಆಡಳಿತದಲ್ಲಿ ಕನ್ನಡ, ಸಚಿವಾಲಯದಲ್ಲಿ ಕನ್ನಡ ಮೊದಲ ಭಾಷೆಯಾಗಬೇಕಿದ್ದರೆ ಆಗಿನ ಮುಖ್ಯಮಂತ್ರಿ ಐಎಎಸ್ ಅಧಿಕಾರಿಗಳಿಗೆ ಸಾಚ ಪ್ರಶ್ನೆ ಮಾಡಿದ್ದರ ಫಲ…

ಇಗೋರಿ ಚಂದ್ರಶೇಖರ್ ಅಂತಿದ್ದ ಧರ್ಮಸಿಂಗ್, ಬಾ ಗುರು ಗೊತ್ತಿದೆ ಅಂತಿದ್ದ ಗೌಡರು, ಚಂದ್ರಣ್ಣ ಅಂತಿದ್ದ ಸೋಮಣ್ಣ, ನಾಗಣ್ಣ, ಎಲ್ರಿ ಟೈಮ್ ಸರಿಯಾಗಿ ಬರಲ್ಲ ಅನ್ನುತ್ತಿದ್ದ ಟಿಎನ್ಎನ್ ಗೆ ನೀವು ಕಾಂಗ್ರೆಸ್ ಇತಿಹಾಸವನ್ನೆಲ್ಲ ಹೇಳಿ ಮುಖ್ಯ ವಿಷಯಕ್ಕೆ ಬರುವ ಹೊತ್ತಿಗೆ ಬಂದಿದ್ದೇನೆ ಅನ್ನುತ್ತಿದ್ದರು.ಸಾಚ ಪ್ರಶ್ನೆಗೆ ಸಮಾಧಾನದ ಉತ್ತರ ಕೊಡುತ್ತಿದ್ದ ಟಿಎನ್ಎನ್, ಎಸ್ ಕೆ ರಾಮು, ಗೆಬ್ರಿಯಲ್ ವಾಜ್ ಪ್ರಶ್ನೆ ಕೇಳಿದ್ರೆ ಬಿಡ್ರೀ ಹಿಂದೂ, ಇಕನಾಮಿಕ್ಸ್ ಟೈಮ್ ಪೇಪರ್ ನಮ್ಮ ಜನ ಓದಲ್ಲ ಅಂದುಬಿಡುತ್ತಿದ್ದರು. ಆಗಲೂ ನೆರವಿಗೆ ಬರುತ್ತಿದ್ದ ಸಾಚ ಓದಲಿ ಬಿಡಲಿ ಪತ್ರಕರ್ತರ ಪ್ರಶ್ನೆಗೆ ನೀವು ಸಮಾಜಾಹಿಶಿ ಕೊಡಲೇ ಬೇಕು ಅಂತ ಹಠಕ್ಕೆ ಬೀಳೋರು. ಏ ಅಬೂಬಕರ್ ಈ ಚಂದ್ರಶೇಖರ್ ಗೆ ಇನ್ನೊಂದು ಮಸಾಲೆ ದೋಸೆ ಕೊಡುಸ್ರೀ ಎಂದು ನಗುತ್ತಿದ್ದರು. ಪಾರ್ಸೆಲ್ಲೂ ಮಾಡಿಸುತ್ತಿದ್ದರು.  ಸಣ್ಣ ಪುಟ್ಟ ಹೊಸ ಮಂತ್ರಿಗಳು ಇವರ ಬಾಯಿಗೆ ಸಿಕ್ಕರಂತೂ ಮುಗಿದೇ ಹೋಯ್ತು ಮರುಹುಟ್ಟು ಪಡೆದು ಬರಬೇಕಿತ್ತು.

ಸ್ಪಟಿಕ ಸ್ಪಷ್ಟವಾಗಿದ್ದೇನೆ ಎನ್ನುತ್ತಿದ್ದ ಸಾವಿರ ಸುಳ್ಳುಗಳ ಸರದಾರ ಎಂದು ರಘುಪತಿಯಿಂದ ಬಿರುದಾಂಕಿತರಾದ ಮಾರ್ಪಾಡಿ ವೀರಪ್ಪಮೊಯ್ಲಿಗೆ ಸಾಚ ‘ಏನು ಕಾರ್ಕಳೋ ಗೊಮ್ಮಟರು’ ಎನ್ನುತ್ತಿದ್ದರು.
ಪತ್ರಿಕಾಗೋಷ್ಠಿಗೆ ಸ್ವಲ್ಪ ತಡವಾದರೂ ಜನಾರ್ಧನ ಪೂಜಾರಿಯವರನ್ನು ಕೆಣಕುತ್ತಿದ್ದರು. “ಹೇಗೂ ಟೈಮ್ ಆಗಿದೆ  ಮೀಸೇ ಸರಿಯಾಗಿ ತಿದ್ದಿಕೊಂಡು ಬನ್ನಿ. ನಮ್ಮ ಫೋಟೋಗ್ರಾಫರ್ ಬರ್ತಾರೆ ”

ಕನ್ನಡ ಚಳವಳಿ ನಾಯಕ ಜಿ ನಾರಾಯಣ ಕುಮಾರ್ ಪತ್ರಿಕಾಗೋಷ್ಠಿ ಸಾಚ ಅವರ ಮೇಲೆ ನಿಂತಿರೋದು. ವಾಟಾಳ್ ರಷ್ಟು ಕಠಿಣ ಮತ್ತು ನಾಟಕೀಯವಲ್ಲದ ಜಿ ನಾ ಕು ಅಪ್ಪಟ ಕನ್ನಡ ಕಂದನಂತೆ  ಕನವರಿಸುತ್ತಿದ್ದರೆ ಸಾಚ ತಿದ್ದುತ್ತಿದ್ದರು. ಅವರಿಗಾಗಿಯೇ ಒಂದು ಪ್ಯಾಕ್ ವಿಲ್ಸ್ ಸಿಗರೇಟನ್ನು ಪಾಲನೇತ್ರರಿಗೆ ಹೇಳಿ ಮೀಸಲಿರಿಸುತ್ತಿದ್ದರು. ಅಸೆಂಬ್ಲಿಯಲ್ಲಿ ಕಾಸಿಲ್ಲದ ನಮಗೆಲ್ಲ ತಿಂಡಿ ಕಾಫಿ ಕೊಡಿಸುತ್ತಿದ್ದರು. ಜುಗ್ಗ ಪ್ರವೃತ್ತಿಯ ಸಾಚನ ನಡವಳಿಕೆ ಅನುಮಾನ ತರಿಸುತ್ತಿತ್ತು. ಆದರೆ ಆಮೇಲೆ ಗೊತ್ತಾಯ್ತು  ಜಿ ನಾ ಕು ಗೂಗಲ್ ಪೇ ಮಾಡ್ತಾರೆ ಅಂತ.

ದಿನ ಬೆಳಗ್ಗೆ ಬೆಂಗಳೂರಿನಲ್ಲಿ ಇದ್ದರೆ ಸಿಗುತ್ತಿದ್ದ ಪಟೇಲರನ್ನು ಕಾಣಲು ಕಾವೇರಿಗೆ ಹೋದರೆ ನಾಪತ್ತೆ! ಜನಮರುಳೋ ಜಾತ್ರೆಮರುಳೋ ಶಂಕರಲಿಂಗಪ್ಪ ಎಲ್ಲಪ್ಪ…
ಅಂದ್ರೆ ಒಂದು ಶುಷ್ಕ ನಗುವಿನೊಂದಿಗೆ ಕಿವಿಯಲ್ಲಿ ಹೇಳುತ್ತಿದ್ದರು.  ಹೌದಾ ಅಲ್ಲಿಗೆ ಹೋಗ್ತೀನಿ  ಹತ್ರೀ ಗಾಡಿ ಎನ್ನತ್ತಾ ಸಿಗರೇಟ್ ಹಚ್ಚಿ ಬಾಯಲ್ಲಿ ಕಚ್ಚಿ ಜಿಂದಾಲ್ ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯ ಕಡೆಗೆ ಬರ್ರೋ ಎಂದು ಸ್ಕೂಟರ್ ಓಡಿಸುತ್ತಿದ್ದರು. ಹಿಂದೆ ಕುಳಿತ ನಾನು ಸಿಗರೇಟ್ ಬೂದಿ ನನ್ನ ಕಣ್ಣಿಗೆ ಹಾರದಂತೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಜಿಂದಾಲ್ ಹೊಕ್ಕು ಪಟೇಲರನ್ನು ಹುಡುಕಿ ಮಾತಾಡಿದರೆ ಸಮಾಧಾನ….

ಕುತ್ತಿಗೆಯವರೆಗೆ ಜೇಡಿಮಣ್ಣಿನಲ್ಲಿ ಹೂತು ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಪಟೇಲರು ‘ಓ ಬಾರಪ್ಪ ಚಂದ್ರು  ನೋಡಿಲ್ಲಿ ದೇವೇಗೌಡ ಒಬ್ಬನೇನಾ ಮಣ್ಣಿನ ಮಗ ನಾನು ಮಣ್ಣಿನ ಮಗನೇ ‘ ಎಂದು ಚಟಾಕಿ ಹಾರಿಸಿದರೇ ಸಾಚಗೇ ಸಮಾಧಾನ.  ಸಾಚ ನೆನಪಿನ ಹಾದಿ ಬಹು ದೂರದ್ದು.. ಅದನ್ನು ಇನ್ನೂ ಕ್ರಮಿಸುವುದಿದೆ..

* ವೈ ಜಿ ಅಶೋಕ್ ಕುಮಾರ್.

Share :

About the Author

Leave a Reply

Your email address will not be published. Required fields are marked *

About our Editor

Snehapriya Nagaraj is one of the renowned film journalist with vast experience of more than 25 years in the field of film industry. Apart from being columist for many news publications he has also penned many novels. Nagaraj is honoured with many awards for his immense contribution in film media.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports