ಇದು ಜೀತ ಪದ್ಧತಿಯ ಅನಿಷ್ಟಗಳನ್ನು ತೆರೆದಿಡುತ್ತದೆ. ಶತ ಶತಮಾನಗಳಿಂದ ನಡೆದು ಬಂದ ಅನಿಷ್ಟ ಪದ್ಧತಿಗಳ ಕಥೆ ಹೇಳುತ್ತದೆ.. ಅದೇ ‘ಮಾನ’.
ಕನ್ನಡದ ಹೆಸರಾಂತ ಕಾದಂಬರಿಕಾರ ಕುಂಬಾರ್ ವೀರಭದ್ರಪ್ಪ ಅವರ ಕಥೆಯಾಧರಿಸಿ ತಯಾರಾಗಿರುವ ಚಿತ್ರದಲ್ಲಿ ಅಪರೂಪದ ಚಿತ್ರಣಗಳಿವೆ. ಮುಖ್ಯವಾಗಿ ಡೈನಾಮಿಕ್ ಹೀರೋ ದೇವರಾಜ್ ಮತ್ತು ಅಪ್ಪಟ ಕಲಾವಿದೆ ಉಮಾಶ್ರೀ ಜೋಡಿಯಾಗಿ ನಟಿಸಿರುವುದು ವಿಶೇಷ. ಸೆಬಾಸ್ಟಿಯನ್ ಡೇವಿಡ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಮೂದಲ ಬಾರಿಗೆ ದೇವರಾಜ್ ಮತ್ತು ಉಮಾಶ್ರೀ ದಂಪತಿಯರಾಗಿ ನಟಿಸಿದ್ದಾರೆ. ಮುಖ್ಯವಾಗಿ ಈ ಕಲಾವಿದರಿಬ್ಬರು ಜೀತದಾಳುಗಳಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದೆ. ಕಾಂತಲಕ್ಷ್ಮಿ ಮತ್ತು ರಮೇಶ್ ಬಾಬು ನಿರ್ಮಾಣ ಮಾಡಿರುವ ಚಿತ್ರವಿದು.

ಟೀಸರ್ ಬಿಡುಗಡೆಯಲ್ಲಿ ಹಲವು ವಿಶೇಷತೆಗಳಿದ್ದವು. ಅದರಲ್ಲಿ ತಂದೆಯ ಚಿತ್ರಕ್ಕೆ ಮಗ ಟೀಸರ್ ಬಿಡುಗಡೆ ಮಾಡಿದ್ದು ಸೇರಿತ್ತು.. ಹೌದು ಪ್ರಜ್ವಲ್ ದೇವರಾಜ್ ಚಿತ್ರಕ್ಕೆ ಶುಭ ಹಾರೈಸಿದರು. ತಂದೆಯವರ ಶ್ರಮವನ್ನೂ ವರ್ಣಿಸಿದರು.
ಇದು 70 ರ ದಶಕದಲ್ಲಿ ನಡೆಯುವ ಕಥೆ. ನೈಜ ಘಟನೆಯನ್ನು ಆಧರಿಸಿ ಕುಂ.ವೀ. ಅವರು ಈ ಕಥೆ ಬರೆದಿದ್ದರು. ದೇವರಾಜ್ ಅವರು ಒಪ್ಪಿದರೆ ಇದನ್ನು ಸಿನಿಮಾ ಮಾಡೋಣ ಎಂದ ಡೇವಿಡ್ ಬಳಿ ಹೇಳಿದ್ದೆ. ದೇವರಾಜ್ ಉಮಾಶ್ರೀ ಇಬ್ಬರೂ ಅದ್ಭುತ ಅಭಿನಯ ನೀಡಿದ್ದಾರೆ ಎಂದರು ನಿರ್ಮಾಪಕ ರಮೇಶ್ ಬಾಬು.

ಮಾನಿಗ ಎಂಬ ಹೆಸರಿನ ಜೀತದಾಳು ಪಾತ್ರ ನನ್ನದು. ಈ ರೀತಿಯ ಪಾತ್ರ ಹೊಸದಲ್ಲದಿದ್ದರೂ ವಿಭಿನ್ನವಾದ ಕಥೆ ಇದರಲ್ಲಿದೆ. ಹೀಗಾಗಿ ನಟಿಸಲು ಒಪ್ಪಿದೆ ಎಂದರು ದೇವರಾಜ್. ಕಸದ ಗುಂಡಿಗೆ ಇಳಿಸಿ ಚಿತ್ರೀಕರಣ ಮಾಡಿದ್ದಾರೆ ನಿರ್ದೇಶಕರು. ಚಿತ್ರ ನೈಜವಾಗಿ ಮೂಡಿ ಬಂದಿದೆ, ಕಾಮಿಡಿ ವರ್ಕ್ ಆದರೆ ಇದೊಂದು ಕಮರ್ಷಿಯಲ್ ಚಿತ್ರವಾಗಿ ಯಶಸ್ಸು ಕಾಣಲಿದೆ. ಒಳ್ಳೆಯ ಪಾತ್ರದಲ್ಲಿ ಕಾಣಿಸಿಕೊಂಡ ಹೆಮ್ಮೆ ಮತ್ತು ಖುಷಿ ಇದೆ ಎಂದರು.
ನಟಿ ಉಮಾಶ್ರೀ ಅವರಿಗೂ ಪಾತ್ರ ಖುಷಿ ಕೊಟ್ಟಿದೆಯಂತೆ.. ಗಂಡನಿಗೆ ನೆರವು ನೀಡುವ ಹೆಂಡತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ, ನಾನು ದೇವರಾಜ್ ಹಲವು ಚಿತ್ರಗಳಲ್ಲಿ ನಟಿಸಿದ್ದರೂ ಮೊದಲ ಬಾರಿಗೆ ಗಂಡ ಹೆಂಡತಿಯಾಗಿ ಕಾಣಿಸಿಕೊಂಡಿದ್ದೇವೆ. ಇಂತಹ ದೌರ್ಜನ್ಯ ದಬ್ಬಾಳಿಕೆ ಇಂದಿಗೂ ಮುಂದುವರಿದೆ, ಅದನ್ನು ಸಿನಿಮಾ ಮೂಲಕ ಬೇರೆಯದೇ ರೀತಿ ತೋರಿಸಲಾಗಿದೆ ಎಂದರು ಉಮಾಶ್ರೀ.
ನಿರ್ದೇಶಕ ಸೆಬಾಸ್ಟಿಯನ್ ಡೇವಿಡ್ ಕಲಾವಿದರ ಗುಣಗಾನ ಮಾಡಿದರು. ಮದ್ದೂರು, ಮೈಸೂರು ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗಿದೆ. ಉಮಾಶ್ರೀ ಮತ್ತು ದೇವರಾಜ್ ಇಬ್ಬರೂ ಅನುಪಮ ಕಲಾವಿದರು ಎಂದರು.
ನಿರ್ಮಾಪಕಿ ಕಾಂತಲಕ್ಷ್ಮಿ ಅವರಿಗೆ ಒಳ್ಳೆಯ ಚಿತ್ರ ಮಾಡಿದ ಖುಷಿ ಅವರ ಮಾತಿನಿಂದ ವ್ಯಕ್ತವಾಯಿತು.
ಮಹರ್ಷಿ ವಾಣಿಯ ಆನಂದ್ ಗುರೂಜಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
















