
ಪ್ಯಾನ್ ಇಂಡಿಯಾ ಡಾರ್ಲಿಂಗ್ ಅಥವಾ ರಾಕಿಂಗ್ ಸ್ಟಾರ್ ಯಶ್ ಕೊಂಚ ಬದಲಾಗಿದ್ದಾರೆ. ಒಂದು ಚಿತ್ರದ ಸೋಲು ಅಥವಾ ಭ್ರಮಾಧೀನಕ್ಕೊಳಪಟ್ಟ ಮನಸ್ಸಿನ ಮಾಗಿದ ಪ್ರಕ್ರಿಯೆಯಲ್ಲಿ ಆತ್ಮವಿಮರ್ಶೆಯ ಶೈಲಿಯಲ್ಲಿ ಅವರೀಗ ಮಾತನಾಡುತ್ತಿದ್ದಾರೆ..
ಈಚೆಗೆ ಬೆಂಗಳೂರಿನಲ್ಲಿ ನಡೆದ ಬಹು ಭಾಷಾ ಚಿತ್ರ ‘ರಾಮಾಯಣ’ ಹೊಸ ಟೀಸರ್ ಬಿಡುಗಡೆಯಲ್ಲಿ ನಿರ್ಮಾಪಕರಾಗಿ ರಾಮಾಯಣ ಆಶಯಗಳು ದೊಡ್ಡ ಮಟ್ಟದಲ್ಲಿ ಅವರು ಮಾಡುವ ಪ್ರಯತ್ನಗಳ ಕುರಿತು ಬೆಳಕು ಚೆಲ್ಲಿದರು..
ಕೆಲವೊಮ್ಮೆ ಗಡಿ ದಾಟಿ; ಸೋಲು ಗೆಲುವುಗಳನ್ನು ಮೀರಿ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಆಗ ಎದುರಾಗುವ ಸಂಕಷ್ಟಗಳು ನಮ್ಮ ದಾರಿಯ ಮೈಲಿಗಲ್ಲುಗಳಾಗುತ್ತವೆ. ಹೆಜ್ಜೆ ಗುರುತುಗಳಾಗುತ್ತವೆ ಮತ್ತು ಮೇಲತ್ತುವವರಿಗೆ ಮೆಟ್ಟಿಲೂ ಆಗುತ್ತವೆ ಎಂದು ಮಾರ್ಮಿಕವಾಗಿ ಹೇಳುತ್ತಾ ಹೋದರು.

ಸಾಮಾಜಿಕ ಮಾಧ್ಯಮವೂ ಈಗ ನಮ್ಮನ್ನು ಎಚ್ಚರಿಸುತ್ತದೆ. ಅಲ್ಲಿ ವಿಎಫ್ ಎಕ್ಸ್ ಕುರಿತು, ಕಲಾವಿದರ ಕುರಿತೂ ಚರ್ಚೆ ನಡೆಯುತ್ತದೆ. ಆದರೆ ಒಂದು ಕೃತಿಯ ಸರಿಯಾದ ಸಮರ್ಥನೆ ಮಾತ್ರ ಎಲ್ಲಿಯೂ ಕಾಣುವುದಿಲ್ಲ. ಒಂದು ಪ್ರಯತ್ನ ಎಲ್ಲದಕ್ಕೂ ದೊಡ್ಡದು ಎಂಬುದನ್ನು ಮನಗಾಣಬೇಕು. ಅದರ ಹೊರತುಪಡಿಸಿ ಯಾರನ್ನೂ ದೂರುವುದು ಬೇಡ; ನಾವೂ ಪ್ರೀತಿ ಹಂಚೋಣ ಎಂದರು.
‘ರಾಮಾಯಣ’ದಲ್ಲಿ ರಾಮನ ಪಾತ್ರಕ್ಕೆ ಬಹುದೊಡ್ಡ ಡೆಡಿಕೇಶನ್ ಬೇಕು. ರಣಬೀರ್ ಕಪೂರ್ ನಿಜಕ್ಕೂ ಧನ್ಯತಾ ಭಾವದಲ್ಲಿ ಮೀಯುವಂತಹ ಅಭಿನಯ ನೀಡಿದ್ದಾರೆ. ಸಾಯಿ ಪಲ್ಲವಿ ಹಾಗೂ ಇತರರು ತಮ್ಮ ಕಲಾ ವೈಭವ ಮೆರೆದಿದ್ದಾರೆ. ಸೋನಿ ಪಿಕ್ಚರ್ಸ್ ಈ ಚಿತ್ರವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿದೆ. ಹಾಲಿವುಡ್ ಮಟ್ಟಕ್ಕೆ ಚಿತ್ರವಿದೆ ಎಂದಾಗ ಅದರ ಬಂಡವಾಳ ಎಷ್ಟು ಎಂಬುದು ಪ್ರಶ್ನೆಯಾಗುತ್ತದೆ.
ಸುಮಾರು ನಾಲ್ಕು ಸಾವಿರ ಕೋಟಿ ಬಂಡವಾಳ ಎಂದಾಗ, ಅದರ ಮೌಲ್ಯದತ್ತ ಜಗತ್ತು ಗಮನ ಹರಿಸುತ್ತದೆ. ಈ ಚಿತ್ರ ನಿರ್ಮಾಪಕರಲ್ಲಿ ನಾನೂ ಇದ್ದೇನೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳುತ್ತಾ ಹೋದರು ಯಶ್.
ನಿತೇಶ್ ತಿವಾರಿ ನಿರ್ದೇಶನದ ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಹಾಗೂ ಡಿಎನ್ಇಜಿ ಸಂಸ್ಥೆಗಳ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನ ಪಾಲುದಾರಿಕೆ ಸಹ ಇದೆ.

ನವೆಂಬರ್ 5ರಂದು 3ಡಿ ತಂತ್ರಜ್ಞಾನದ ಅಚ್ಚರಿ ಭಾರತೀಯ ಮತ್ತು ಅಂತಾರಾಷ್ಟ್ರೀಯ ಪ್ರೇಕ್ಷಕನ ಅನುಭವಕ್ಕೆ ಸಾಕ್ಷಿಯಾಗಲಿದೆ. ರಾಧಿಕಾ ಯಶ್, ರಕುಲ್ ಪ್ರೀತಿ ಮೊದಲಾದವರ ಉಪಸ್ಥಿತಿ ಈ ಸಂದರ್ಭದಲ್ಲಿತ್ತು.
















