
ರೇಟಿಂಗ್ : 3/5
ನಿರ್ಮಾಣ : ಆದರ್ಶ್ ಗುಂಡುರಾಜ್
ನಿರ್ದೇಶನ : ನವೀನ್ ಶಕ್ತಿ
ಋತುಚಕ್ರ ಪೂರ್ವ ಚರಿತೆ
ಕಾಲಮಾನದಲ್ಲಿ ಬಳಲುವ ವನಿತೆ
ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಹಲವಾರು ಸಂಕಷ್ಟ ಅಥವಾ ತೊಂದರೆಗಳನ್ನು ಎದುರಿಸುತ್ತಾರೆ ಎಂಬುದು ಅನುಭವ ಮತ್ತು ವೈದ್ಯಕೀಯ ಶಾಸ್ತ್ರದ ಮೂಲಕ ನಿರೂಪಿತವಾಗಿದೆ.
ಆದರೆ ಅದೇ ಋತುಚಕ್ರ ಪೂರ್ವದಲ್ಲಿನ ಆಕೆಯ ವರ್ತನೆ ಇಡೀ ಬದುಕನ್ನೇ ವಿನಾಶದ ಅಂಚಿಗೆ ದೂಡಿ ಬಿಡಬಹುದು. ಇದು ಹೇಗೆ ಎಂದು ತಿಳಿಯಲು ‘ಕ್ಯಾಲೆಂಡರ್’ ಚಿತ್ರವನ್ನು ಸಂಪೂರ್ಣ ನೋಡಲೇ ಬೇಕು..
ಒಬ್ಬ ಉತ್ತಮ ನಡವಳಿಕೆಯ ವೈದ್ಯ ಮದ್ಯದ ದಾಸನಾಗಿ ದಿನಗಳನ್ನು ಬಾರ್ ನಲ್ಲಿ ಕಳೆಯುತ್ತಾನೆ. ಅದು ಏಕೆ ಎಂಬುದು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಆತನ ಹೆಸರು ಆಕಾಶ್..!
ಅದೂ ಸ್ನೇಹಿತನ ಬಾರ್. ಹಾಗಾಗಿ ಅಲ್ಲಿಯೇ ಮಹಡಿಯ ಮೇಲೆ ರೂಮ್ ಕೂಡ ಆತನಿಗೆ ಲಭ್ಯ. ಅಲ್ಲಿಗೆ ಆತನ ಸ್ನೇಹಿತೆ ಮಾಳವಿಕಾಗೆ ಮಾತ್ರ ಎಂಟ್ರಿ ಸೌಲಭ್ಯ. ಅವಳಿಗೆ ಗಂಡನಿಂದ ಸಂಕಷ್ಟ ಎದುರಾಗುತ್ತದೆ.

ಕೊಲೆಯೊಂದರ ಸಂಶಯ ವ್ಯಕ್ತಿಯಾಗಿ ಇರುವಾಗಲೇ ಆಕಾಶ್ ಮತ್ತೆ ಸ್ನೇಹಿತ ಪಂಚಾಂಗ ಜೊತೆ ಬಾರ್ ನಲ್ಲಿ ಕುಡಿಯುವಾಗ ಪ್ರೇಮ ಕಥೆ ಬಿಚ್ಚಿಕೊಳ್ಳುತ್ತದೆ. ಅದೂ ವಿಚಿತ್ರ ಪ್ರೇಮ ವಿಚಿತ್ರ ಸನ್ನಿವೇಶದಲ್ಲಿ ಕೊನೆಯಾಗುತ್ತದೆ.
ಹೀಗಿರುವಾಗ ಶಾಲಾ ದಿನಗಳ ಸ್ನೇಹಿತೆ ಮತ್ತು ರಾಜಕಾರಣಿ ಪತ್ನಿ ನಿಗೂಢ ಸಾವಿಗೀಡಾಗಿ ಅದೂ ಆಕಾಶ್ ಕಡೆಗೆ ಸಂಶಯದ ನೋಟ ಬೀರುತ್ತದೆ. ಆದರೆ ಆಕಾಶ್ ಅದೆಲ್ಲದರ ಹೊರತುಪಡಿಸಿ ಶೆಡ್ ಒಂದರಲ್ಲಿ ಮಾಡುವ ಸಂಶೋಧನೆಯಿಂದ ಋತು ಚಕ್ರ ಕ್ಯಾಲೆಂಡರ್ ಸಮಸ್ಯೆ ಅನಾವರಣಗೊಳ್ಳುತ್ತದೆ.
ಇಲ್ಲಿ ನಿರ್ದೇಶಕರು ಪೊಲೀಸ್ ಶಿಷ್ಟಾಚಾರದ ವಿಷಯ ತಿಳಿದುಕೊಳ್ಳಲು ಹೋಗಿಲ್ಲ ; ಕೊಲೆ ಪ್ರಕರಣದ ಸಿನಿಮಾ ಬಿಲ್ಡಪ್ ರೂಪದಲ್ಲಿಯೇ ನಡೆಯುತ್ತದೆ. ಹಾಗಾಗಿ ಸಿಐಡಿ ಅಧಿಕಾರಿಯಾಗಿ ಬರುವ ರಮೇಶ್ ಇಂದಿರಾ ಮನಸೋ ಇಚ್ಛೆ ಡೈಲಾಗ್ ಹೊಡೆಯುತ್ತಾರೆ. ಹಣ, ಹೆಣ್ಣು, ಹೆಂಡವನ್ನು ಸುಲಭವಾಗಿ ಸ್ವೀಕರಿಸುತ್ತಾರೆ.
ವೈದ್ಯನಾಗಿರುವ ಸದೃಢ ಯುವಕ ಕುಡಿತದ ನಂತರವೂ ಅದೇ ಸದೃಢತೆ ಉಳಿಸಿಕೊಂಡು ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ತಮಾಷೆ ಎನಿಸಿಕೊಳ್ಳುತ್ತದೆ. ಅದೇ ರೀತಿ ಯಾವುದೋ ಹಳೇ ಗೋಡೌನ್ ನಲ್ಲಿ ಸಮಸ್ಯೆಗೆ ಪರಿಹಾರ ಹುಡುಕುವುದು..
ಮಹಿಳೆಯರ ಸಮಸ್ಯೆ ಮತ್ತು ಅದರ ಪರಿಹಾರ ಕುರಿತ ಕೊನೆಯ ದೃಶ್ಯಗಳು ಮಾತ್ರ ಪರಿಣಾಮಕಾರಿಯಾಗಿವೆ. ಇಲ್ಲಿ ಮಾಲಾಶ್ರೀ ಅವರು ಕಾಣಿಸಿಕೊಂಡಿರುವುದು ವಿಶೇಷ ಮತ್ತು ಔಚಿತ್ಯವೆನಿಸುತ್ತದೆ.

ನಿರ್ದೇಶಕರು ಪರಿಣಾಮಕಾರಿ ವಿಷಯ ಆಯ್ದುಕೊಂಡಿದ್ದರೂ ಬಾರ್ ಕುಡಿತ ಮೊದಲಾದ ವಿಷಯಗಳು ಚಿತ್ರದ ಆಶಯವನ್ನೇ ನುಂಗಿ ಹಾಕಿವೆ. ಆಕಾಶ್ ಪಾತ್ರದಲ್ಲಿ ಆದರ್ಶ್ ಗುಂಡುರಾಜ್ ನಟನೆಯಲ್ಲಿ ಏಕತಾನತೆಯನ್ನು ಕಾಯ್ದುಕೊಂಡಿದ್ದಾರೆ.
ಮಾಳವಿಕ ಪಾತ್ರದಲ್ಲಿ ನಿವಿಷ್ಕಾ ಪಾಟೀಲ್ ಹಾಗೂ ನಕ್ಷತ್ರಾ ಪಾತ್ರದಲ್ಲಿ ಸುಶ್ಮಿತಾ ವಿಚಿತ್ರ ವರ್ತನೆ ತೋರುವುದು ಏಕೆಂದು ಚಿತ್ರದ ಕೊನೆಯಲ್ಲಿ ಅರ್ಥವಾಗುತ್ತದೆ.
ಮುಟ್ಟು ಸಂಭವಿಸುವ ಪೂರ್ವದಲ್ಲಿ ಕೆಲವು ಮಹಿಳೆಯರ ವರ್ತನೆ ಏಕೆ ಹೀಗೆ ಇರುತ್ತದೆ ಅದಕ್ಕೆ ಕಾರಣಗಳೇನು ಎಂಬುದಕ್ಕೆ ಚಿತ್ರದ ಕಥೆ ಬರೆದು ನಿರ್ಮಿಸಿದ್ದಾರೆ ಆದರ್ಶ್ ಗುಂಡುರಾಜ್.
ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಸುಚೇಂದ್ರ ಪ್ರಸಾದ್, ಚಂದ್ರಪ್ರಭ ತಮ್ಮ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ.
ರಮೇಶ್ ಕೊಯಿರಾ ಛಾಯಾಗ್ರಹಣ, ಸುನಾದ್ ಗೌತಮ್ ಸಂಗೀತ ಚಿತ್ರಕ್ಕೆ ಪೂರಕ.
















